×
Ad

ಅತ್ಯಾಚಾರ, ವಂಚನೆ ಪ್ರಕರಣ: ನರಿಮೊಗರು ಉಮೇಶ್‌ಗೆ ಏಳು ವರ್ಷ ಜೈಲುಶಿಕ್ಷೆ

Update: 2019-07-02 21:05 IST

ಮಂಗಳೂರು, ಜು.2: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಹೆಣ್ಣು ಮಗುವಿನ ತಂದೆಯಾದ ಬಳಿಕ ಮದುವೆಯಾಗದೆ ವಂಚಿಸಿದ ಆರೋಪ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಏಳು ವರ್ಷ ಜೈಲು, 70 ಸಾವಿರ ರೂ.ದಂಡ ಹಾಗೂ ಮಗುವಿಗೆ 1 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಮಂಗಳವಾರ ನ್ಯಾಯಾಲಯ ತೀರ್ಪು ನೀಡಿದೆ.

ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಉಮೇಶ್ (34) ಶಿಕ್ಷೆಗೊಳಗಾದ ಅಪರಾಧಿ.

ಅತ್ಯಾಚಾರ (ಐಪಿಸಿ ಸೆಕ್ಷನ್ 376) ಪ್ರಕರಣದಲ್ಲಿ ಏಳು ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದರೆ ಮತ್ತೆ ಒಂದು ವರ್ಷ ಜೈಲು ಶಿಕ್ಷೆ. ದಂಡದ ಮೊತ್ತದಲ್ಲಿ 40 ಸಾವಿರ ರೂ. ಸಂತ್ರಸ್ತೆಗೆ ನೀಡಬೇಕು. ಮದುವೆಯಾಗುವುದಾಗಿ ನಂಬಿಸಿ ಮೋಸ (ಐಪಿಸಿ ಸೆಕ್ಷನ್ 417) ಕಾಯ್ದೆಗೆ ಒಂದು ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 10 ಸಾವಿರ ರೂ.ಸಂತ್ರಸ್ತೆಗೆ ನೀಡಬೇಕು. ಮಗುವಿನ ಹೆಸರಿನಲ್ಲಿ 1 ಲಕ್ಷ ರೂ. ನಿರಖು ಠೇವಣಿ ಇಡಬೇಕು. ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಖರ್ಚಿಗೆ ಹಣ ನೀಡಬೇಕು ಎಂದು ನ್ಯಾಯಾಧೀಶರಾದ ಸಯಿದುನ್ನೀಸ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

ಉಮೇಶ್ ನರಿಮೊಗರಿನಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಸಮೀಪದಲ್ಲಿರುವ ಮನೆಯೊಂದರ 21 ವರ್ಷದ ಯುವತಿ ಪರಿಚಯವಾಗಿ ಪರಸ್ಪರ ಪ್ರೇಮಿಸತೊಡಗಿದ್ದರು. 2009ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಪರಿಣಾಮ ಗರ್ಭವತಿಯಾದ ಯುವತಿ 2010 ಮಾರ್ಚ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಈ ಸಂದರ್ಭ ಉಮೇಶನಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಹೇಳಿದಾಗ ಆತ ಬಂದಿಲ್ಲ. ಮದುವೆಯಾಗುವಂತೆ ಒತ್ತಾಯಿಸಿದಾಗ ಅದಕ್ಕೂ ಒಪ್ಪಿಲ್ಲ. 2010 ಮಾರ್ಚ್ 26ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಆತನ ವಿರುದ್ಧ ಅತ್ಯಾಚಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಪಿಎಸ್ಸೈ ಎಂ.ರವಿಕುಮಾರ್ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಅತ್ಯಾಚಾರ ಪ್ರಕರಣವಾದ ಕಾರಣ 2018ರಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಲ್ಪಟ್ಟಿದೆ. ಇಲ್ಲಿ ಎಂಟು ಮಂದಿಯನ್ನು ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಉಮೇಶ, ತಾಯಿ, ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. 2016ರಲ್ಲಿ ಇವರೇ ಮಗುವಿನ ತಂದೆ-ತಾಯಿ ಎಂದು ವರದಿ ಬಂದಿತ್ತು. ಡಿಎನ್‌ಎ ನಡೆಸಿದ ವೈದ್ಯರು ಸಹಿತ ಸಾಕ್ಷಿ ಹೇಳಿದ್ದಾರೆ. ಇದರ ಆಧಾರದಲ್ಲಿ ಆರೋಪ ಸಾಬೀತಾಗಿದೆ.

ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತ ವಾದಿಸಿದ್ದರು. ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದ ಉಮೇಶನನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News