ಭಾರತಕ್ಕೆ ನ್ಯಾಟೊ ಮಿತ್ರ ಸ್ಥಾನಮಾನ: ಶಾಸನಾತ್ಮಕ ನಿಬಂಧನೆ ಜಾರಿ ಮಾಡಿದ ಅಮೆರಿಕ

Update: 2019-07-02 15:42 GMT

ವಾಶಿಂಗ್ಟನ್, ಜು.2: ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಭಾರತವನ್ನು ಅಮೆರಿಕದ ನ್ಯಾಟೊ ಮಿತ್ರರು ಹಾಗೂ ಇಸ್ರೇಲ್ ಮತ್ತು ದಕ್ಷಿಣ ಕೊರಿಯದಂತಹ ದೇಶಗಳಿಗೆ ಸಮನಾಗಿ ನಿಲ್ಲಿಸುವಂತಹ ಶಾಸನಾತ್ಮಕ ನಿಬಂಧನೆಯನ್ನು ಅಮೆರಿಕ ಸೆನೆಟ್ ಜಾರಿ ಮಾಡಿದೆ. ಇಂತಹ ಪ್ರಸ್ತಾವವನ್ನು ಹೊಂದಿರುವ ವಿತ್ತೀಯ ವರ್ಷ 2020ರ ರಾಷ್ಟ್ರೀಯ ರಕ್ಷಣಾ ಪ್ರಮಾಣೀಕರಣ ಕಾಯ್ದೆ ಅಥವಾ ಎನ್‌ಡಿಎಎಯನ್ನು ಅಮೆರಿಕದ ಸೆನೆಟ್‌ನಲ್ಲಿ ಕಳೆದ ವಾರ ಅಂಗೀಕರಿಸಲಾಗಿದೆ.

ಸೆನೆಟ್ ಇಂಡಿಯಾ ಕ್ಯಾಕಸ್‌ನ ಉಪಾಧ್ಯಕ್ಷ ಸೆನೆಟರ್ ಜಾನ್ ಕಾರ್ನಿನ್ ಸೆನೆಟ್ ಇಂಡಿಯಾ ಕ್ಯಾಕಸ್‌ನ ಉಪಾಧ್ಯಕ್ಷ ಸೆನೆಟರ್ ಮಾರ್ಕ್ ವಾರ್ನರ್ ಬೆಂಬಲದೊಂದಿಗೆ ಪರಿಚಯಿಸಿದ ತಿದ್ದುಪಡಿಯು ಅರಬ್ಬೀ ಸಮುದ್ರದಲ್ಲಿ ಮಾನವೀಯ ನೆರವು, ಉಗ್ರವಾದನಿಗ್ರಹ, ನಕಲುನಿಗ್ರಹ ಮತ್ತು ಜಲಭದ್ರತೆಯ ವಿಷಯಗಳಲ್ಲಿ ಅಮೆರಿಕ ಮತ್ತು ಭಾರತ ಮಧ್ಯೆ ಹೆಚ್ಚಿನ ರಕ್ಷಣಾ ಸಹಕಾರವನ್ನು ಒದಗಿಸುತ್ತದೆ. ಕಳೆದ ವಾರ ಹೌಸ್ ಇಂಡಿಯಾ ಕ್ಯಾಕಸ್‌ನ ಉಪಾಧ್ಯಕ್ಷ ಬ್ರಾಡ್ ಶರ್ಮನ್, ಕಾಂಗ್ರೆಸ್‌ನ ಜೋ ವಿಲ್ಸನ್, ಅಮಿ ಬೆರ, ಟೆಡ್ ಯೊಹೊ, ಜಾರ್ಜ್ ಹೋಲ್ಡಿಂಗ್, ಎಡ್ ಕೇಸ್ ಮತ್ತು ರಾಜ ಕೃಷ್ಣಮೂರ್ತಿ ಅವರೂ ಅಮೆರಿಕ ಮತ್ತು ಭಾರತದ ಸಂಬಂಧವನ್ನು ವೃದ್ಧಿಸುವ ಇದೇ ಮಾದರಿಯ ಶಾಸನಾತ್ಮಕ ಪ್ರಸ್ತಾವವನ್ನು ಪರಿಚಯಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌ನ ಎರಡೂ ವಿಭಾಗಗಳಾದ ಪ್ರತಿನಿಧಿಗಳ ಸದನ ಮತ್ತು ಸೆನೆಟ್‌ನಲ್ಲಿ ಅಂಗೀಕಾರಗೊಂಡ ನಂತರ ಈ ಮಸೂದೆಯನ್ನು ಕಾನೂನಾಗಿ ಜಾರಿ ಮಾಡಲಾಗುವುದು.

ಜುಲೈ 29ರ ನಂತರ ಆಗಸ್ಟ್‌ನಲ್ಲಿ ಒಂದು ತಿಂಗಳ ಬಿಡುವಿಗೆ ಮುಂದೂಡಲ್ಪಡುವುದಕ್ಕೂ ಮೊದಲು ಜುಲೈ ತಿಂಗಳಲ್ಲೇ ಸದನವು ಎನ್‌ಡಿಎಎಯ ತನ್ನ ನಿರೂಪಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಮೆರಿಕ ಮತ್ತು ಭಾರತದ ಮಧ್ಯೆ ಯುದ್ಧತಾಂತ್ರಿಕ ಜೊತೆಗಾರಿಕೆಯನ್ನು ವೃದ್ಧಿಗೊಳಿಸುವಲ್ಲಿ ಸೆನೆಟರ್ ಕಾರ್ನಿನ್ ಮತ್ತು ವಾರ್ನರ್ ಅವರ ಪ್ರಯತ್ನವನ್ನು ಹಿಂದು ಅಮೆರಿಕನ್ ಪ್ರತಿಷ್ಠಾನ ಶ್ಲಾಘಿಸಿದೆ.

ಭಾರತವನ್ನು ಪ್ರಮುಖ ರಕ್ಷಣಾ ಜೊತೆಗಾರನನ್ನಾಗಿ ಅಮೆರಿಕ 2016ರಲ್ಲಿ ಗುರುತಿಸಿತ್ತು. ಇದರಿಂದಾಗಿ ಭಾರತ ಅಮೆರಿಕದ ಅತ್ಯಂತ ಸಮೀಪದ ಮಿತ್ರರಿಗೆ ಮತ್ತು ಜೊತೆಗಾರರಿಗೆ ಸಮಾನವಾಗಿ ಅಮೆರಿಕದಿಂದ ಹೆಚ್ಚಿನ ಸುಧಾರಿತ ಮತ್ತು ಸೂಕ್ಷ್ಮ ತಂತ್ರಜ್ಞಾನಗಳನ್ನು ಖರೀದಿಸಲು ಅವಕಾಶ ದೊರಕಿತ್ತು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸಹಕಾರದ ಭರವಸೆಯನ್ನು ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News