ಭಾರೀ ಮಳೆ : ಮುಂಬೈಯಲ್ಲಿ ಪೇಜಾವರ ಸ್ವಾಮೀಜಿಗೆ ನೆರವಾದ ಟ್ಯಾಕ್ಸಿ ಚಾಲಕ ಶರ್ಫುದ್ದೀನ್
ಉಡುಪಿ, ಜು.2: ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೆ ಆಪತ್ಕಾಲದಲ್ಲಿ ಟ್ಯಾಕ್ಸಿ ಚಾಲಕ ನೆರವಾದ ಘಟನೆ ಇಂದು ಮುಂಬೈಯಲ್ಲಿ ನಡೆದಿದೆ.
ಪೇಜಾವರ ಸ್ವಾಮೀಜಿ ಬರೋಡಾದಿಂದ ಮುಂಬೈಯ ಡೊಂಬಿವಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಬೆಳಗಿನ ಜಾವ 3.30ಕ್ಕೆ ಅವರು ಡೊಂಬಿವಲಿಗೆ ತಲುಪಬೇಕಾಗಿತ್ತು. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ರೈಲು ಬೆಳಗ್ಗೆ 8.30ಕ್ಕೆ ಬೋರಿವಿಲಿ ರೈಲು ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗದೆ ರೈಲು ಬೋರಿವಿಲಿ ರೈಲ್ವೆ ಸ್ಟೇಶನ್‌ನಲ್ಲಿಯೇ ನಿಂತಿತ್ತು.
ಈ ಸಂದರ್ಭ ಪೇಜಾವರ ಸ್ವಾಮೀಜಿ ಟ್ಯಾಕ್ಸಿಯಲ್ಲಿ ಡೊಂಬಿವಲಿಗೆ ಹೋಗಲು ತೀರ್ಮಾನಿಸಿ ನಿಲ್ದಾಣದಿಂದ ಹೊರಗೆ ಬಂದರು. ಆದರೆ ಭಾರೀ, ಮಳೆ, ವಾಹನ ದಟ್ಟನೆ, ಸುಮಾರು 55 ಕಿ.ಮೀ. ದೂರ, ಸಂಚಾರ ಸಮಸ್ಯೆಯಿಂದಾಗಿ ಟ್ಯಾಕ್ಸಿಗಳ ಚಾಲಕರು ಸ್ವಾಮೀಜಿಯನ್ನು ಕರೆದುಹೋಗಲು ನಿರಾಕರಿಸಿದರೆನ್ನಲಾಗಿದೆ.
ಈ ವೇಳೆ ನಿಲ್ದಾಣದಲ್ಲಿದ್ದ ಗುಲ್ಬರ್ಗ ಮೂಲದ ಟ್ಯಾಕ್ಸಿ ಚಾಲಕ ಶರ್ಫುದ್ದೀನ್ ಮಲೀಕ್ ಮುಂದೆ ಬಂದರು. ಮಳೆಯನ್ನು ಲೆಕ್ಕಿಸದೆ ಪೇಜಾವರ ಸ್ವಾಮೀಜಿ ಯನ್ನು ಡೊಂಬಿವಲಿಗೆ ಮಧ್ಯಾಹ್ನ 12.15ರ ಸುಮಾರಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋದರು ಎಂದು ತಿಳಿದುಬಂದಿದೆ.