ಹಿರಿಯರ ನೆನಪು ಸಂಸ್ಮರಣಾ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಉಡುಪಿ, ಜು.2:ಯಕ್ಷಗಾನವನ್ನು ಪ್ರೀತಿಸಿ, ಅದರ ಉಳಿವು- ಬೆಳವಣಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದ ಹಾಗೂ ಸೀಮಿತ ಪ್ರದೇಶದಲ್ಲಿ ಮಾತ್ರ ಪರಿಚಯಗೊಂಡ ಹಿರಿಯ ಕಲಾವಿದರನ್ನು ಹಾಗೂ ಯಕ್ಷಗಾನಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯರ ನೆನಪು ಶೀರ್ಷಿಕೆಯ ಹಿರಿಯ ಕಲಾವಿದರ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸುವ ಯೋಜನೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ವತಿಯಿಂದ 2019-20 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಕಲಾಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕಾಡೆಮಿ ವತಿಯಿಂದ ಕಾರ್ಯಕ್ರಮ ನಡೆಸಲು ಸಂಸ್ಥೆಗೆ 10,000ರೂ. ನೀಡಲಾಗುವುದು. ಒಂದು ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರನ್ನು ಕುರಿತು ಒಂದೇ ಸಂಸ್ಮರಣಾ ಕಾರ್ಯಕ್ರಮವನ್ನು ಸಹ ನಡೆಸಬಹುದು.
ಹಿರಿಯರ ನೆನಪು ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲು ಆಸಕ್ತಿಯಿರುವ ಕಲಾಸಂಸ್ಥೆಗಳು ತಮ್ಮ ಪೂರ್ಣ ವಿಳಾಸದೊಂದಿಗೆ ( ದೂರವಾಣಿ/ ಮೊಬೈಲ್ ನಂಬರ್‌ನೊಂದಿಗೆ) ಮನವಿಯನ್ನು ಜು.25ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇಲ್ಲಿಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂರವಾಣಿ ಸಂಖ್ಯೆ: 080-22113146 ನ್ನು ಸಂಪರ್ಕಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.