ರಾಯ್‌ಬರೇಲಿ ಕೋಚ್ ಫ್ಯಾಕ್ಟರಿಯ ಸಾಂಸ್ಥಿಕೀಕರಣಕ್ಕೆ ಸೋನಿಯಾ ವಿರೋಧ

Update: 2019-07-02 16:35 GMT

ಹೊಸದಿಲ್ಲಿ,ಜು.2: ತನ್ನ ಲೋಕಸಭಾ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿನ ರೈಲ್ವೆಯ ಮಾಡರ್ನ್ ಕೋಚ್ ಫ್ಯಾಕ್ಟರಿ(ಎಂಸಿಎಫ್)ಯ ಸಾಂಸ್ಥಿಕೀಕರಣದ ವಿಷಯವನ್ನು ಮಂಗಳವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು,ಸರಕಾರವು ದೇಶದ ಆಸ್ತಿಗಳನ್ನು ಅಗ್ಗದ ಬೆಲೆಗಳಲ್ಲಿ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಎಂಸಿಎಫ್ ಸೇರಿದಂತೆ ರೈಲ್ವೆಯ ಆರು ಉತ್ಪಾದನಾ ಘಟಕಗಳನ್ನು ಸಾಂಸ್ಥೀಕರಿಸಲು ಸರಕಾರವು ನಿರ್ಧರಿಸಿದೆ. ವಾಸ್ತವದಲ್ಲಿ ಸಾಂಸ್ಥಿಕೀಕರಣವು ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಇದರಿಂದ ಸಾವಿರಾರು ಜನರು ನಿರುದ್ಯೋಗಿಗಳಾಗಲಿದ್ದಾರೆ ಎಂದರು.

ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಯುಪಿಎ ಆಡಳಿತದಲ್ಲಿ ಎಂಸಿಎಫ್ ಅನ್ನು ಆರಂಭಿಸಲಾಗಿತ್ತು. ಅದು ಭಾರತೀಯ ರೈಲ್ವೆಯ ಅತ್ಯಾಧುನಿಕ ಫ್ಯಾಕ್ಟರಿಯಾಗಿದ್ದು, ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಕೋಚ್‌ಗಳನ್ನು ತಯಾರಿಸುತ್ತಿದೆ. ಸರಕಾರವು ಅದರಲ್ಲಿ ಬೃಹತ್ ಬಂಡವಾಳ ಹೂಡಿಕೆಯನ್ನು ಮಾಡಿದೆ. ಸರಕಾರವು ಅದನ್ನೇಕೆ ಸಾಂಸ್ಥೀಕರಿಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಈ ಕ್ರಮದಿಂದಾಗಿ 2,000 ಕಾರ್ಮಿಕರ ಭವಿಷ್ಯವು ಅನಿಶ್ಚಿತವಾಗಿದೆ. ಜನತೆಯ ಏಳಿಗೆ ಸಾರ್ವಜನಿಕ ಕ್ಷೇತ್ರಗಳ ಉದ್ಯಮಗಳ ಪ್ರಾಥಮಿಕ ಕರ್ತವ್ಯವಾಗಿದೆಯೇ ಹೊರತು ಬಂಡವಾಳಶಾಹಿಗಳಿಗೆ ಲಾಭ ಮಾಡುವುದಲ್ಲ ಎಂದರು.

ಪ್ರತ್ಯೇಕ ರೈಲ್ವೆ ಮುಂಗಡ ಪತ್ರ ಪರಿಪಾಠವನ್ನು ನಿಲ್ಲಿಸಿದ್ದಕ್ಕಾಗಿಯೂ ಸೋನಿಯಾ ಸರಕಾರವನ್ನು ತರಾಟೆಗೆತ್ತಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News