ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ ಕಳ್ಳತನಕ್ಕೆ ಯತ್ನ
ಮೂಡುಬಿದಿರೆ: ಇಲ್ಲಿನ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ)ಯಲ್ಲಿ ಸೋಮವಾರ ತಡರಾತ್ರಿ ಬಸದಿಯ ಮುಖ್ಯಧ್ವಾರದ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಬೀಗ ಮುರಿದು ಬಸದಿಯ ಒಳಗೆ ನುಗ್ಗಿರುವ ಕಳ್ಳರು, ಬಸದಿಯಲ್ಲಿದ್ದ ಕಾಣಿಕೆ ಹುಂಡಿಯ ಬೀಗ ಒಡೆದು ಅಲ್ಲಿದ್ದ ನಗದನ್ನು ಕದ್ದಿರುವುದು ಬೆಳಕಿಗೆ ಬಂದಿದೆ.
ಘಟನೆ ಸ್ಥಳಕ್ಕೆ ಕ್ರೈಂ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್, ಎಸಿಪಿ ಉತ್ತರ ವಿಭಾಗ ಶ್ರೀನಿವಾಸ ಗೌಡ, ಮೂಲ್ಕಿ ಇನ್ಸ್‍ಪೆಕ್ಟರ್ ಅನಂತ ಪದ್ಮನಾಭ, ಮೂಡುಬಿದಿರೆ ಠಾಣಾಧಿಕಾರಿ ದೇಜಪ್ಪ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಿಸಿ ಟಿ.ವಿ ನಿಷ್ಕ್ರೀಯಗೊಂಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಬಸದಿಗೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಭದ್ರತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಬಗ್ಗೆ ಪೊಲೀಸ್-ಬಸದಿಯ ಪ್ರಮುಖರು ಸಮಾಲೋಚನೆ ನಡೆಸಿದ್ದಾರೆ.
ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಅಮೇರಿಕದಲ್ಲಿ ಧಾರ್ಮಿಕ ಪ್ರವಾಸದಲ್ಲಿದ್ದು, ಘಟನೆಯ ಬಗ್ಗೆ ಸೂಕ್ತ ತನಿಖೆಗಾಗಿ ಪೊಲೀಸರನ್ನು ಒತ್ತಾಯಿಸಿದ್ದಾರೆ.