×
Ad

ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳ ಜೊತೆ ಶಾಸಕರ ಸಭೆ

Update: 2019-07-02 22:15 IST

ಬಂಟ್ವಾಳ, ಜು. 2: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಎಫ್‍ಎಸ್‍ಎಸ್‍ಎಂ ಮಾದರಿಯ ವ್ಯವಸ್ಥಿತ ಹಾಗೂ ಸುಧಾರಿತ ಒಳಚರಂಡಿ ವ್ಯವಸ್ಥೆಯನ್ನು ಕೈಗೊಳ್ಳಲು ಪುರಸಭೆ ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಗಳು ನಿರಾಸಕ್ತಿ ತೋರುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಶಾಸಕ ರಾಜೇಶ್ ನಾಯ್ಕ್ ತರಾಟೆಗೆ ತೆಗೆದುಕೊಂಡರು. 

ಮಂಗಳವಾರ ಬೆಳಗ್ಗೆ ಪುರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಇನ್ನೂ ಅನುಷ್ಠಾನಗೊಳ್ಳದ ಹಳೆಯ ಒಳಚರಂಡಿ ವ್ಯವಸ್ಥೆಗೆ ಜೋತು ಬಿದ್ದಿರುವ ಮುಖ್ಯಾಧಿಕಾರಿ ಹಾಗೂ ಪುರಸಭಾ ಅಧಿಕಾರಿಗಳು ತನ್ನ ಪ್ರಯತ್ನಕ್ಕೆ ಅಸಹಕಾರ ನೀಡುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

56 ಕೋಟಿ ರೂ. ಒಳಚರಂಡಿ ಯೋಜನೆ ನಿಷ್ಪ್ರಯೋಜಕ

ಜನರು ಕುಡಿಯಲು ಬಳಸುತ್ತಿರುವ ನೇತ್ರಾವತಿ ನದಿ ನೀರಿಗೆ ಪುರಸಭೆಯ ಚರಂಡಿ ನೀರು ಹರಿದು ಹೋಗುತ್ತಿದೆ. ಇದು ಲಕ್ಷಾಂತರ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿಂದೆ 56 ಕೋಟಿ ರೂ. ವ್ಯಯಿಸಿದ ಒಳಚರಂಡಿ ಯೋಜನೆ ಇನ್ನೂ ಅನುಷ್ಠಾನಗೊಳ್ಳದೆ ನಿಷ್ಪ್ರಯೋಜಕವಾಗುತ್ತಿದೆ. ಅದೇ ಯೋಜನೆಗೆ ಮತ್ತೆ ಹಣ ಸುರಿಯುವುದು ಸರಿಯಲ್ಲ. ಹೊಸ ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿ ಯೋಜನೆ ಮಂಜೂರುಗೊಳಿಸಿದರೆ ಮುಖ್ಯಾಧಿಕಾರಿ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಪುರಸಭೆ ಹಾಗೂ ಒಳಚರಂಡಿ ಮಂಡಳಿ ಹಗ್ಗಜಗ್ಗಾಟದಿಂದಾಗಿ ಜನರು ತೊಂದರೆ ಪಡುವಂತಾಗಿದೆ ಎಂದು ಶಾಸಕ ರಾಜೇಶ್ ನಾಯಕ್ ಗರಂ ಆದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ವ್ಯವಸ್ಥಿತ ಒಳಚರಂಡಿ ನಿರ್ಮಿಸುವ ನಿಟ್ಟಿನಲ್ಲಿ ತಾನು ಪ್ರಯತ್ನ ನಡೆಸುತ್ತಿದ್ದೇನೆ. ಆದರೆ, ಅಧಿಕಾರಿಗಳು ಇನ್ನೂ ಹಳೆಯ ಒಳಚರಂಡಿಯ 56 ಕೋಟಿ ರೂ. ಮುಗಿಸುವ ಆಸಕ್ತಿಯಲ್ಲಿದ್ದೀರಿ, ಒಳಚರಂಡಿ ಯೋಜನೆಯ ಬಗ್ಗೆ ಒಂದು ವರ್ಷದಲ್ಲಿ ಯಾವುದೇ ಪ್ರಗತಿ ಆಗಿಲ್ಲ, ಇನ್ನೂ ನಾಲ್ಕು ವರ್ಷದಲ್ಲಿ ಏನು ಪ್ರಗತಿಯಾಗುತ್ತದೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳ ಸ್ಪಂದನೆ ಇಲ್ಲದೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ನಾನೇ ನಿಮ್ಮ ಮೇಲೆ ಕಂಪ್ಲೆಂಟ್ ಕೊಡುತ್ತೇನೆ" 

ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹಾಗೂ ಇಂಜಿನಿಯರ್ ಶೋಭಾ ಲಕ್ಷ್ಮೀಯ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದಂತೆಯೇ ಎಂಜಿನಿಯರ್ ಮೇಲೆ ದೂರು ನೀಡುವುದಾಗಿ ಮುಖ್ಯಾಧಿಕಾರಿ ತಿಳಿಸಿದಾಗ ನೀವೇನು ಅವರ ಮೇಲೆ ಕಂಪ್ಲೆಂಟ್ ಮಾಡುವುದು?, ನಾನೇ ನಿಮ್ಮ ಮೇಲೆ ಕಂಪ್ಲೆಂಟ್ ಕೊಡುತ್ತೇನೆ? ಎಂದು ಶಾಸಕ ರಾಜೇಶ್  ಮುಖ್ಯಾಧಿಕಾರಿಗೆ ತಿರುಗೇಟು ನೀಡಿದರು.

ಆ ಕಾಣದ ಕೈ ಯಾವುದು?

ಹೊಸ ಒಳಚರಂಡಿ ಯೋಜನೆ ಮಾಡದಂತೆ ಯಾವುದೋ ಕಾಣದ ಕೈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಶಾಸಕರು ಜನೋಪಯೋಗಿ ಯೋಜನೆ ಬೇಡ ಎಂದಾದರೆ ಬರೆದು ಕೊಡಿ ಎಂದರು. ಹೊಸ ಒಳಚರಂಡಿ ಯೋಜನೆಯಿಂದ ಶೇ. ನೂರು ತ್ಯಾಜ್ಯ ನಿರ್ವಹಣೆ ಸಾಧ್ಯವಿದೆ, ಹಳೆಯ ಯೋಜನೆ ಸಂಪೂರ್ಣ ವ್ಯರ್ಥ ಹಾಗೂ ಹಣ ಪೋಲು, ನಿಮ್ಮ ನಿರ್ಧಾರದ ಮೇಲೆ ನನ್ನ ನಿರ್ಧಾರ ಇದೆ. ಅಧಿಕಾರಗಳ ನಿರಾಸಕ್ತಿ ಜನರಿಗೂ ಗೊತ್ತಾಗಲಿ ಎಂದು ಶಾಸಕ ರಾಜೇಶ್ ಅಧಿಕಾರಿಗಳಿಗೆ ತಿಳಿಸಿದರು.

ಸ.ಕು.ನೀ. ಯೋಜನೆ 2 ವರ್ಷ ಕಳೆದರೂ ಪುರಸಭೆಗೆ ಹಸ್ತಾಂತರವಾಗಿಲ್ಲ

ಸಮಗ್ರ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಎರಡೂ ವರ್ಷ ಕಳೆದರೂ ಇದೂ ವರಗೂ ಪುರಸಭೆಗೆ ಹಸ್ತಾಂತರವಾಗದಿರುವ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಂದ ವರದಿ ಕೇಳಿದರು. ಶೇ. 90ತಷ್ಟು ಕಾಮಗಾರಿ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಮುಗಿದಿದ್ದು, ಇನ್ನುಳಿದ 55 ಕಿ.ಮೀ ವ್ಯಾಪ್ತಿ ಬಾಕಿ ಇದೆ ಎಂದು ಎಂಜಿನಿಯರ್ ಶೋಭಾಲಕ್ಷಿ ಮಾಹಿತಿ ನೀಡಿದರೆ, ಬಂಟ್ವಾಳ ವ್ಯಾಪ್ತಿಯಲ್ಲಿ ನೂರಕ್ಕಿಂತಲೂ ಅಧಿಕ ಕಿ.ಮೀ. ಪೈಪ್‍ಲೈನ್ ಕಾಮಗಾರಿ ಬಾಕಿ ಇದೆ ಎಂದಿ ಮುಖ್ಯಾಧಿಕಾರಿ ಉತ್ತರಿಸಿರು.

ಅಧಿಕಾರಿಗಳ ಗೊಂದಲದ ಉತ್ತರದಿಂದ ಸಿಡಿಮಿಡಿಗೊಂಡ ಶಾಸಕ ರಾಜೇಶ್ ನಾಯ್ಕ್ ಈ ರೀತಿ ಉತ್ತರ ನೀಡಿದರೆ ನನಗೆ ಫಾಲೋಅಫ್ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಪುರಸಭಾ ವ್ಯಾಪ್ತಿಯ ಒಟ್ಟು ನೀರಿನ ಸಂಪರ್ಕದ ಬಗ್ಗೆ ಅಧಿಕಾರಿ ಅಸಮರ್ಪಕ ಉತ್ತರ ನೀಡಿದಾಗ ನೀರಿನ ಒಟ್ಟು ಸಂಪರ್ಕದ ಬಗ್ಗೆ ಸರ್ವೆ ನಡೆಸಿ ಸರಿಯಾದ ವರದಿ ನೀಡುವಂತೆ ಸೂಚಿಸಿದರು.

ಕಳೆದ ಬಜೆಟ್‍ನಲ್ಲಿ 48 ಲಕ್ಷ ರೂ. ವ್ಯತ್ಯಾಸ

ಕಳೆದ ಬಜೆಟ್ ಮಂಡನೆಯ ವೇಳೆ ಸುಮಾರು 48 ಲಕ್ಷ ರೂ. ವ್ಯತ್ಯಾಸ ಉಂಟಾಗಿರುವ ಬಗ್ಗೆ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದ ಶಾಸಕರು, ಈ ಸಂಬಂಧ ಅಕೌಂಟೆಂಟನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಪ್ರತಿಕ್ರಿಯಿಸಿ ಡಬಲ್ ಡಾಟ ಎಂಟ್ರಿ ಮಾಡುವಾಗ ಲೋಪ ಉಂಟಾಗಿದೆ. ನಮ್ಮಲ್ಲಿರುವ ಲಿಖಿತ ಲೆಕ್ಕಾಚಾರ ಸರಿಯಾಗಿದೆ ಎಂದಾಗ, ಸಂಬಂಧ ಇಲ್ಲದವರು ಮಾಹಿತಿ ನೀಡುವುದು ಬೇಡ ಎಂದು ಶಾಸಕರು ಮುಖ್ಯಾಧಿಕಾರಿ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು.

ಎಕೌಂಟೆಂಟ್‍ನಿಂದ ಯಾವುದೇ ತಪ್ಪಾಗಿಲ್ಲ, ಲೆಕ್ಕಾಚಾರದ ವ್ಯತ್ಯಾಸ ಉಂಟಾಗಿರುವ ಬಗ್ಗೆ ಅಕೌಂಟೆಂಟ್‍ಗೆ ನೋಟಿಸಿ ಜಾರಿಗೊಳಿಸಿ ಉತ್ತರ ನೀಡುವಂತೆ ಸೂಚಿಸಿಲಾಗಿದ್ದರೂ ಪ್ರತ್ರಿಕ್ರಿಯಿಸಿದ ಕಾರಣ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಎಷ್ಟು ಹಣದ ಅವ್ಯವಹಾರ ನಡೆದಿದೆ, ಆ ಹಣವನ್ನು ಮರು ವಸೂಲಿ ಮಾಡಲಾಗಿದೆಯೇ? ಡಬ್ಬಲ್ ಎಂಟ್ರಿ ಎಂದು ಹೇಳಿ ಕರ್ತವ್ಯದಿಂದ ವಜಾ ಮಾಡಿರುವುದು ಯಾಕೆ, ಈ ಅವ್ಯಹಾರದ ಬಗ್ಗೆ ನನ್ನಲ್ಲಿ ಸಂಪೂರ್ಣ ಮಾಹಿತಿ ಇದೆ, ನಾನೇ ಲೋಕಾಯುಕ್ತ ತನಿಖೆಗೆ ಒತ್ತಾಯಿಸಬೇಕಾ?  ಎಂದು ಶಾಸಕರು ಪ್ರಶ್ನಿಸಿದಾಗ ಉತ್ತರ ನೀಡಲು ಮುಖ್ಯಾಧಿಕಾರಿ ತಬ್ಬಿಬ್ಬಾದರು.

ಹಣ ವ್ಯರ್ಥ ಮಾಡುವುದು ಬೇಡ

ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಈಗಾಗಲೇ ಒಂದೂವರೆ ಕೋಟಿ ರೂ. ವ್ಯಯ ಮಾಡಲಾಗಿದೆ. ಮತ್ತೆ ಅದೇ ಕಾಮಗಾರಿಗೆ ಹಣ ಹಾಕಿ ವ್ಯರ್ಥ ಮಾಡುವುದು ಬೇಡ. 15 ದಿನದ ಕಾಲಾವಕಾಶದೊಳಗೆ ಈ ಬಗ್ಗೆ ಇರುವ ಎಲ್ಲ ಅಡೆತೆಗಳನ್ನು ಸರಿಪಡಿಸಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಪುರಸಭಾ ಆವರಣದೊಳಗೆ ಇರುವ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ತ್ಯಾಜ್ಯ ರಾಶಿ ಹಾಕುತ್ತಿರುವ ಬಗ್ಗೆಯೂ ಅಸಮಾಧಾನಗೊಂಡ ಶಾಸಕರು ಒಂದೋ ಅಂಗನವಾಡಿಯನ್ನು ಸ್ಥಳಾಂತರಿಸಿ ಅಥವಾ ತ್ಯಾಜ್ಯ ಹಾಕುವುದನ್ನು ಬೇರೆಡೆಗೆ ವರ್ಗಾಯಿಸಿ ಎಂದು ಸಲಹೆ ನೀಡಿದರು. ತ್ಯಾಜ್ಯ ಸಂಗ್ರಹದ ಬಕೆಟ್‍ಗಳನ್ನು ಶೀಘ್ರ ವಿತರಿಸಿ ಎಂದು ಈ ಹಿಂದೆಯೇ ಹೇಳಲಾಗಿದ್ದರೂ ಇನ್ನೂ ಬಕೆಟ್ ವಿತರಿಸಿಲ್ಲ, ಇದರಿಂದ ದಾಸ್ತನು ಕೊಠಡಿ ಗುಜರಿ ಅಂಗಡಿಯಂತಾಗಿದೆ, ಬಕೆಟ್ ಶೀಘ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅನಧಿಕೃತ ಫ್ಲೆಕ್ಸ್‍ಗಳನ್ನು ಶೀಘ್ರ ತೆರವುಗೊಳಿಸಿ

ಪುರಸಭಾ ವ್ಯಾಪ್ತಿಯಲ್ಲಿ ಜಾಹೀರಾತು ಹಾಕುವ ಗುತ್ತಿಗೆದಾರಿಗೆ ಯಾವ ಮಾಣದಂಡವನ್ನು ಪಾಲಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ ಅವರು ಅನಧಿಕೃತ ಫ್ಲೆಕ್ಸ್‍ಗಳು ಇರುವುದು ನನ್ನ ಗಮನಕ್ಕೆ ಬಂದಿದ್ದು, ಅವುಳನ್ನು ಶೀಘ್ರ ತೆರವುಗೊಳಿಸುವಂತೆ ಸೂಚಿಸಿದರು. ಸಾಮಥ್ರ್ಯ ಇಲ್ಲದೆ ಗುಜರಿಗೆ ಸೇರಬೇಕಾದ ವಾಹನಗಳಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಏನಾದರೂ ಸಮಸ್ಯೆ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಮತ್ತೆ ಪುರಸಭೆ ಅದಕ್ಕೆ ಬಾಡಿಗೆ ಪಾವತಿಸುವುದು ಸರಿಯಲ್ಲ, ಈ ಬಗ್ಗೆ ಪರಿಶೀಲಿಸಿ ವಾಹನಗಳ ದಾಖಲೆ ಗಳನ್ನು ಸರಿಪಡಿಸಿ ಇಟ್ಟುಕೊಳ್ಳುವಂತೆ ಶಾಸಕರು ಸೂಚಿಸಿದರು.

ಈ ಸಂದರ್ಭ ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಸಂಶುದ್ದೀನ್, ಕಿರಿಯ ಎಂಜಿನಿಯರ್ ಶೋಭಾಲಕ್ಷ್ಮೀ, ಪುರಸಭಾ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪರಿಸರ ಎಂಜಿನಿಯರ್ ಯಾಸ್ಮೀನ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News