×
Ad

ಅಪ್ರಾಪ್ತೆಗೆ ಪೊಲೀಸರಿಂದ ದೌರ್ಜನ್ಯ ಆರೋಪ: ಸಂಪ್ಯ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ, ರಸ್ತೆ ತಡೆ

Update: 2019-07-02 22:36 IST

ಪುತ್ತೂರು: ಕಳ್ಳತನ ಪ್ರಕರಣ ವಿಚಾರಣೆಗೆ ಸಂಬಂಧಿಸಿ ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ನಿವಾಸಿಯಾಗಿರುವ ಅಪ್ರಾಪ್ತೆ ಬಾಲಕಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮತ್ತು ಪ್ರಕರಣವನ್ನು ಖಂಡಿಸಿ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಸಂಪ್ಯ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ ಠಾಣಾಧಿಕಾರಿ ಹಾಗೂ ಅಮಾನತುಗೊಂಡಿರುವ ಮೂವರು ಸಿಬ್ಬಂದಿಗಳನ್ನು ತಕ್ಷಣವೇ ವಜಾಗೊಳಿಸಬೇಕು. ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಅನ್ಯಾಯಕ್ಕೊಳಗಾದ ಬಡಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. 

ಸಂಪ್ಯ ಠಾಣೆಯ ಸರಹದ್ದಿನಲ್ಲಿ ಭ್ರಷ್ಟಾಚಾರ, ಅತ್ಯಾಚಾರ ಮಾಡಿದವರು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಕ್ರಮಕೈಗೊಳ್ಳದ ಪೊಲೀಸರು ದುಡ್ಡು ಪಡೆದು ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ದಲಿತ ಸಂಘಟನೆಯ ಮುಖಂಡ ಎ.ಸಿ.ಆನಂದ್ ಅವರು ಮಾತನಾಡಿ, ದಲಿತ ಸಮುದಾಯದವರೇ ಆದ ಎಸ್‍ಐ ದಲಿತ ಬಾಲಕಿಗೆ ಅನ್ಯಾಯ ಮಾಡಿದ್ದಾರೆ ಎಂದಾದರೆ ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ವಾರದ ಒಳಗಾಗಿ ನ್ಯಾಯ ಸಿಗದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಲ್ಲೂ ನ್ಯಾಯ ಸಿಗದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ನಿರತರು ಪುತ್ತೂರು-ಸುಳ್ಯ ರಸ್ತೆ ಸಂಚಾರವನ್ನು ಕೆಲ ಕಾಲ ತಡೆದು ರಸ್ತೆಯಲ್ಲಿಯೆ ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ನಮ್ಮ ಮುಂದೆ ತೋರಿಸಬೇಕು. ಸಹಾಯಕ ಆಯುಕ್ತರು ಅಥವಾ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ  ಸಮಸ್ಯೆಯನ್ನು ಆಲಿಸಬೇಕು ಎಂದು ಹಠ ಹಿಡಿದರು. 

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಶೀಲ್ದಾರ್ ಅನಂತ ಶಂಕರ್ ಅವರು ಪ್ರತಿಭಟನಾ ನಿರತರಲ್ಲಿ ಮಾತುಕತೆ ನಡೆಸಿದರು. 

ಆದಿ ದ್ರಾವಿಡ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ್ ಬಳ್ಳಾಲ್‍ಭಾಗ್, ದಲಿತ ಸಂಘರ್ಷ ಸಮಿತಿಯ ಮುಖಂಡ ಸೇಸಪ್ಪ ನೆಕ್ಕಿಲು, ಬುದ್ದಿಸ್ಟ್ ಸಂಘಟನೆಯ ದಮ್ಮಾನಂದ ಬೆಳ್ತಂಗಡಿ, ದಲಿತ ನಾಯಕಿ ಲಕ್ಷ್ಮೀ ಸುಬ್ರಹ್ಮಣ್ಯ ಮತ್ತಿತರರು ಮಾತನಾಡಿದರು.

ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಲ್ಲತ್ತಡ್ಕ, ಆದಿ ದ್ರಾವಿಡ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಕೃಷ್ಣ ಸೂಟರ್‍ಪೇಟೆ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಠ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ,ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ವಿಟ್ಲ, ಪರಿಶಿಷ್ಠ ಜಾತಿ ಮತ್ತು ಪಂಗಡದ ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್, ದಲಿತ್ ಸೇವಾ ಸಮಿತಿಯ ಕಡಬ ಸಮಿತಿಯ ಅಧ್ಯಕ್ಷ ಕೇಶವ ಕುಪ್ಲಾಜೆ, ಪುತ್ತೂರು ತಾಲೂಕು ಉಪಾಧ್ಯಕ್ಷ ಮನೋಹರ್ ಕೋಡಿಜಾಲು,ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಚೆನ್ನಪ್ಪ, ದಲಿತ ಸಂಘಟನೆಗಳ ಮುಖಂಡರಾದ ಗಣೇಶ್ ಕಾರೆಕ್ಕಾಡು, ದೇವಪ್ಪ ಕಾರೆಕ್ಕಾಡು, ಸತೀಶ್, ಆನಂದ್.ಕೆ.ಪಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News