ಮನಮೋಹನ್ ಸಿಂಗ್ ರಾಜ್ಯಸಭೆ ಪ್ರವೇಶಕ್ಕೆ ಡಿಎಂಕೆ ನಕಾರ: ರಾಜಸ್ಥಾನದತ್ತ ಕಣ್ಣು ಹೊರಳಿಸಿದ ಕಾಂಗ್ರೆಸ್

Update: 2019-07-02 17:24 GMT

ಹೊಸದಿಲ್ಲಿ,ಜು.2: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜ್ಯಸಭೆಗೆ ಪ್ರವೇಶ ಮಾರ್ಗವು ಇನ್ನೊಂದು ತಿರುವನ್ನು ಪಡೆದುಕೊಂಡಿದೆ. ತಮಿಳುನಾಡಿನಿಂದ ಅವರಿಗೆ ಅವಕಾಶ ಕಲ್ಪಿಸಲು ಒಪ್ಪಂದಕ್ಕೆ ಬರುವಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷ ಡಿಎಂಕೆ ವಿಫಲಗೊಂಡಿವೆ. ಅಸ್ಸಾಂ,ಗುಜರಾತ್ ಮತ್ತು ತಮಿಳುನಾಡುಗಳ ಬಳಿಕ ಇದೀಗ ಕಾಂಗ್ರೆಸ್ ರಾಜ್ಯಸಭೆಗೆ ಸಿಂಗ್ ಅವರ ಮರುನಾಮಕರಣಕ್ಕಾಗಿ ರಾಜಸ್ಥಾನವನ್ನು ನೆಚ್ಚಿಕೊಂಡಿದೆ.

ಡಿಎಂಕೆ ತಮಿಳುನಾಡಿನಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಮಂಗಳವಾರ ಪ್ರಕಟಿಸಿದ್ದು,ಈ ಪೈಕಿ ಒಂದನ್ನು ಮಿತ್ರಪಕ್ಷ ಎಂಡಿಎಂಕೆಯ ವೈಕೊ ಅವರಿಗೆ ಬಿಟ್ಟುಕೊಟ್ಟಿದೆ.

ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ರಾಜ್ಯಸಭೆಯ ತಲಾ ಮೂರು ಸ್ಥಾನಗಳನ್ನು ಗೆಲ್ಲುವಷ್ಟು ಶಾಸಕರನ್ನು ಹೊಂದಿವೆ.

ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನಲಾಲ ಸೈನಿ ಅವರ ನಿಧನದ ಹಿನ್ನ್ನೆಲೆಯಲ್ಲಿ ತಾನು ಅಧಿಕಾರದಲ್ಲಿರುವ ಆ ರಾಜ್ಯದಿಂದ ಒಂದು ರಾಜ್ಯಸಭಾ ಸ್ಥಾನ ತೆರವಾಗಿರುವುದರಿಂದ ಅಲ್ಲಿಂದ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಈಗ ಉದ್ದೇಶಿಸಿದೆ ಎನ್ನಲಾಗಿದೆ.

 ಈ ಹಿಂದೆ ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯರ ಉಮೇದುವಾರಿಕೆಯನ್ನು ಬೆಂಬಲಿಸಿದ್ದ ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಅವರು ಒಂದು ರಾಜ್ಯಸಭಾ ಸ್ಥಾನವನ್ನು ಸಿಂಗ್ ಅವರಿಗೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ರಾಹುಲ್ ಅಥವಾ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ನೇರವಾಗಿ ಸ್ಟಾಲಿನ್‌ ರನ್ನು ಸಂಪರ್ಕಿಸಿರಲಿಲ್ಲ, ಬದಲಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮತ್ತು ಗುಲಾಂ ನಬಿ ಆಝಾದ್ ಅವರಿಗೆ ಹೊಣೆಯನ್ನು ವಹಿಸಲಾಗಿತ್ತು. ಇದು ಡಿಎಂಕೆ ತನ್ನ ಮನಸ್ಸು ಬದಲಿಸಲು ಕಾರಣಗಳಲ್ಲೊಂದು ಎಂದು ಡಿಎಂಕೆಯಲ್ಲಿನ ಮೂಲಗಳು ತಿಳಿಸಿದವು.

2014ರವರೆಗೆ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಸಿಂಗ್ ಅಸ್ಸಾಮಿನಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಈಗ ಅಸ್ಸಾಮಿನಿಂದ ಅವರ ಮರುನಾಮಕರಣಕ್ಕೆ ಅಗತ್ಯ ಸಂಖ್ಯೆಯ ಶಾಸಕರು ಕಾಂಗ್ರೆಸ್ ಬಳಿಯಿಲ್ಲ.

  ಬಿಜೆಪಿಯ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಗುಜರಾತ್‌ನಿಂದ ಎರಡು ರಾಜ್ಯಸಭಾ ಸ್ಥಾನಗಳು ತೆರವಾಗಿರುವುದರಿಂದ ಅಲ್ಲಿಂದ ಸಿಂಗ್ ಅವರನ್ನು ಮರುನಾಮಕರಣಗೊಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ ಏಕಕಾಲಕ್ಕೆ ಎರಡೂ ಸ್ಥಾನಗಳಿಗೆ ಉಪಚುನಾವಣೆಗಳನ್ನು ನಡೆಸಬೇಕೆಂಬ ತನ್ನ ಕೋರಿಕೆ ನಿರಾಕರಿಸಲ್ಪಟ್ಟ ಬಳಿಕ ಅದು ತನ್ನ ನಿರ್ಧಾರವನ್ನು ಬದಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News