×
Ad

​ರಕ್ತಕ್ಕೆ ಬದಲಿ ವ್ಯವಸ್ಥೆಯಿಲ್ಲ: ಶಾಸಕ ಸುನಿಲ್ ನಾಯ್ಕ

Update: 2019-07-02 22:47 IST

ಭಟ್ಕಳ: ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲ. ಮನುಷ್ಯನ ಜೀವನಕ್ಕೆ ರಕ್ತ ಅತ್ಯವಶ್ಯಕ. ಒಂದು ಬಾಟಲ್ ರಕ್ತದಿಂದ ಒಬ್ಬರ ಜೀವನ ಉಳಿಸಬಹುದು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸೋಮವಾರ ತಾಲೂಕು ಸರ್ಕಾರಿ ಆಸ್ಪತ್ರೆ, ಉಡುಪಿ ಬ್ಲಡ್ ಬ್ಯಾಂಕ್, ಐಎಂಎ, ಲ್ಯಾಬ್ ಅಸೋಸಿಯೇಶನ್, ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್, ನೊಂದಾಯಿತ ಮೆಡಿಕಲ್ ಪ್ರಾಕ್ಟಿಷನರ್ಸ್, ಎಎಫ್‍ಇ ಸಹಯೋಗದಲ್ಲಿ ಜರುಗಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತಾಲೂಕಾಸ್ಪತ್ರೆಯ ವ್ಯವಸ್ಥೆ ಈ ಹಿಂದಿಗಿಂತ ಸಾಕಷ್ಟು ಬದಲಾಗಿದೆ. ಶಾಸಕನಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಜನರು ಮತ್ತು ಅಧಿಕಾರಿಗಳ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡಿ ಸಮಸ್ಯೆಗೆ ಸ್ಪಂದಿಸಿದ್ದೇನೆ. ಆಸ್ಪತ್ರೆಯ ವ್ಯವಸ್ಥೆ ಬದಲಾಗಲು ವೈದ್ಯರು ಮತ್ತು ಸಿಬ್ಬಂದಿಯ ಉತ್ತಮ ಸೇವೆಯೇ ಕಾರಣ. ಸರ್ಕಾರಿ ಆಸ್ಪತ್ರೆಗೆ ಇನ್ನೊಂದು ಆಂಬುಲೆನ್ಸ್ ಅವಶ್ಯಕತೆ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಕೆಎಂಸಿ ಮಣಿಪಾಲ ನಿಯೊನಾಟಾಲಜಿ ವಿಭಾಗದ ಮುಖ್ಯಸ್ಥ ಡಾ. ಲೇಸಲೀನ್ ಲೂಯಿಸ್ ಮಾತನಾಡಿ, ರಕ್ತದಾನ ಶಿಬಿರವನ್ನು ವೈದ್ಯರ ದಿನದಂದು ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದೇ ರೀತಿ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಬೇಕು ಎಂದರು. ನಂತರ ಶಾಸಕರು ಹಾಗೂ ಸಾರ್ವಜನಿಕರು ತಾಲೂಕಾಸ್ಪತ್ರೆ ವೈದ್ಯರನ್ನು ಸನ್ಮಾನಿಸಿದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರನ್ನು ಆಟೊ ರಿಕ್ಷಾ ಚಾಲಕರು ಸನ್ಮಾನಿಸಿದರು. ಶಿಬಿರದಲ್ಲಿ 70ಕ್ಕೂ ಅಧಿಕ ಜನ ರಕ್ತದಾನ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್, ಉಡುಪಿ ಬ್ಲಡ್ ಬ್ಯಾಂಕ್ ವೈದ್ಯೆ ವೀಣಾ ಕುಮಾರಿ, ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News