ಇರಾನ್ ಬೆಂಕಿಯೊಂದಿಗೆ ಆಟ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Update: 2019-07-02 17:55 GMT

ವಾಶಿಂಗ್ಟನ್, ಜು. 2: 2015ರ ಪರಮಾಣು ಒಪ್ಪಂದದಡಿಯಲ್ಲಿ ನಿಗದಿಪಡಿಸಲಾಗಿರುವ ಸಂವರ್ಧಿತ ಯುರೇನಿಯಂ ಮೀಸಲು ಮಿತಿಯನ್ನು ಮೀರುವ ಮೂಲಕ ಇರಾನ್ ‘ಬೆಂಕಿಯೊಂದಿಗೆ ಆಟವಾಡುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

2015ರಲ್ಲಿ ಇರಾನ್ ಜಗತ್ತಿನ ಪ್ರಬಲ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದಿಂದ ಅಮೆರಿಕ ಈಗಾಗಲೇ ಹೊರಬಂದಿರುವುದನ್ನು ಸ್ಮರಿಸಬಹುದಾಗಿದೆ.

ಈ ಒಪ್ಪಂದದ ಅನುಸಾರ ಹೊಂದಬಹುದಾದ ಸಂವರ್ಧಿತ ಯುರೇನಿಯಂ ಮೀಸಲು ಮಿತಿಯನ್ನು ತಾನು ಮೀರಿದ್ದೇನೆ ಎಂಬುದಾಗಿ ಇರಾನ್ ಸೋಮವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಮೇ ತಿಂಗಳಲ್ಲಿ ಪ್ರಕಟಿಸಲಾದ ತನ್ನ ಯೋಜನೆಯಲ್ಲಿರುವ 300 ಕಿಲೋಗ್ರಾಮ್ ಮಿತಿಯನ್ನು ಇರಾನ್ ಮೀರಿದೆ’’ ಎಂಬುದಾಗಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಇರಾನ್‌ನ ಸುದ್ದಿ ಸಂಸ್ಥೆ ‘ಇಸ್ನ’ಕ್ಕೆ ಹೇಳಿದ್ದಾರೆ.

ಆದಾಗ್ಯೂ, ಇದರಿಂದ ಹಿಂದಕ್ಕೆ ಬರುವ ಅವಕಾಶವೂ ಇದೆ ಎಂದಿದ್ದಾರೆ.

‘‘ತಾವೇನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ಗೊತ್ತು. ತಾವು ಯಾವುದರ ಜೊತೆ ಆಡುತ್ತಿದ್ದೇವೆ ಎನ್ನುವುದೂ ಅವರಿಗೆ ಗೊತ್ತು. ಅವರು ಬೆಂಕಿಯ ಜೊತೆ ಆಡುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಇರಾನ್ ವಿರುದ್ಧ ದಿಗ್ಬಂಧನಕ್ಕೆ ಇಸ್ರೇಲ್ ಒತ್ತಾಯ

ಇರಾನ್ ವಿರುದ್ಧ ದಿಗ್ಬಂಧನಗಳನ್ನು ವಿಧಿಸುವಂತೆ ಇಸ್ರೇಲ್ ಐರೋಪ್ಯ ದೇಶಗಳನ್ನು ಒತ್ತಾಯಿಸಿದೆ.

ಅದೇ ವೇಳೆ, ರಶ್ಯ ಇರಾನ್ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿದೆ. ಆದರೆ, ಇದು ಅಮೆರಿಕದ ಒತ್ತಡದ ಫಲ ಎಂಬುದಾಗಿ ಅದು ಹೇಳಿದೆ. ಅಮೆರಿಕದ ಒತ್ತಡವು ಇರಾನ್ ಪರಮಾಣು ಒಪ್ಪಂದವು ವಿಫಲವಾಗುವಂತೆ ಮಾಡಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಒಪ್ಪಂದಕ್ಕೆ ಹೊರತಾದ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳದಂತೆ ಬ್ರಿಟನ್ ಇರಾನ್‌ಗೆ ಕರೆ ನೀಡಿದೆ. ಒಪ್ಪಂದದಡಿಯಲ್ಲಿನ ತನ್ನ ಬದ್ಧತೆಯಿಂದ ಇರಾನ್ ದೂರ ಸರಿಯಬಾರದು ಎಂದು ವಿಶ್ವಸಂಸ್ಥೆ ಹೇಳಿದೆ.

ಇರಾನ್ ಪರಮಾಣು ಒಪ್ಪಂದ ಉಲ್ಲಂಘಿಸಿಲ್ಲ: ವಿದೇಶ ಸಚಿವ

 2015ರ ಪರಮಾಣು ಒಪ್ಪಂದವನ್ನು ಇರಾನ್ ಉಲ್ಲಂಘಿಸಿಲ್ಲ ಎಂದು ಆ ದೇಶದ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದ್ದಾರೆ.

ತನ್ನ ಸಂವರ್ಧಿತ ಯುರೇನಿಯಂ ಸಂಗ್ರಹವು 300 ಕೆಜಿ ಮಿತಿಯನ್ನು ಮೀರಿದೆ ಎಂಬುದಾಗಿ ಇರಾನ್ ಸೋಮವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಅಮೆರಿಕದ ಕಠಿಣ ದಿಗ್ಬಂಧನಗಳಿಂದ ಇರಾನ್‌ನ ಆರ್ಥಿಕತೆಯನ್ನು ರಕ್ಷಿಸಲು ಐರೋಪ್ಯ ದೇಶಗಳು ಮುಂದಾಗದೆ ಇದ್ದಲ್ಲಿ, ಮುಂದಿನ ಹಂತವಾಗಿ ಒಪ್ಪಂದದಲ್ಲಿರುವ 3.67 ಶೇಕಡ ಮಿತಿಯನ್ನು ಮೀರಿ ತಾನು ಯುರೇನಿಯಂ ಸಂವರ್ಧನೆ ಮಾಡುವುದಾಗಿ ಅದು ಹೇಳಿದೆ.

‘‘ಇರಾನ್‌ನ ಕ್ರಮವು ಒಪ್ಪಂದವನ್ನು ಉಲ್ಲಂಘಿಸಿಲ್ಲ’’ ಎಂದು ಇರಾನ್ ವಿದೇಶ ಸಚಿವರು ಹೇಳಿದರು.

 ‘‘ಈ ಬಗ್ಗೆ ನಾವು ಮೊದಲೇ ಘೋಷಿಸಿದ್ದೆವು. ನಾವು ಏನು ಮಾಡುತ್ತೇವೆ ಎನ್ನುವುದನ್ನು ಮೊದಲೇ ಹೇಳುವ ಮೂಲಕ ನಾವು ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಇದು ನಮ್ಮ ಹಕ್ಕು ಎಂಬುದಾಗಿ ನಾವು ಭಾವಿಸಿದ್ದೇವೆ. ಇದು ಪರಮಾಣು ಒಪ್ಪಂದದಲ್ಲೇ ಇದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News