ಲಂಕಾ ಸರಣಿ ಬಾಂಬ್ ಸ್ಫೋಟ: ಪೊಲೀಸ್ ಮುಖ್ಯಸ್ಥ, ಮಾಜಿ ರಕ್ಷಣಾ ಕಾರ್ಯದರ್ಶಿ ಬಂಧನ

Update: 2019-07-02 17:57 GMT

ಕೊಲಂಬೊ, ಜು. 2: ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದಂದು ನಡೆದ ಸರಣಿ ಬಾಂಬ್ ಸ್ಫೋಟಗಳನ್ನು ತಡೆಯಲು ವಿಫಲವಾಗಿದ್ದಾರೆ ಎಂಬ ಆರೋಪದಲ್ಲಿ ದೇಶದ ಪೊಲೀಸ್ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಮುಖ್ಯಸ್ಥರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇನ್ಸ್‌ಪೆಕ್ಟರ್ ಜನರಲ್ ಪುಜಿತ್ ಜಯಸುಂದರ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫೆರ್ನಾಂಡೊರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಕರ ತಿಳಿಸಿದರು.

ಎಪ್ರಿಲ್ 21ರಂದು ಶ್ರೀಲಂಕಾದಾದ್ಯಂತ ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 258 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಸ್ವೀಕರಿಸಲಾದ ಭದ್ರತಾ ಮುನ್ನೆಚ್ಚರಿಕೆಗಳಿಗೆ ಅನುಸಾರವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವುದು ಮಾನವತೆ ವಿರುದ್ಧದ ಅಪರಾಧವಾಗಿದೆ ಎಂಬುದಾಗಿ ಅಟಾರ್ನಿ ಜನರಲ್ ಹೇಳಿದ ಒಂದು ದಿನದ ಬಳಿಕ ಈ ಬಂಧನಗಳನ್ನು ನಡೆಸಲಾಗಿದೆ.

ಅವರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅಲ್ಲಿಂದಲೇ ಅವರನ್ನು ಬಂಧಿಸಲಾಯಿತು ಎಂದು ಗುಣಶೇಕರ ತಿಳಿಸಿದರು.

ಅಟಾರ್ನಿ ಜನರಲ್ ನೀಡಿದ ಸೂಚನೆಯಂತೆ ಅವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಕೊಲೆ ಮೊಕದ್ದಮೆಗಳನ್ನು ಹೂಡಬಹುದಾಗಿದೆ.

ಜಯಸುಂದರ ಮತ್ತು ಫೆರ್ನಾಂಡೊ ಸಂಸದೀಯ ತನಿಖಾ ಆಯೋಗವೊಂದರ ಮುಂದೆ ಸಾಕ್ಷ ನುಡಿಯುತ್ತಾ, ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಬೆದರಿಕೆಗಳನ್ನು ಅಂದಾಜಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರಗಳನ್ನು ಅನುಸರಿಸಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಿಫಲರಾಗಿದ್ದಾರೆ ಎಂಬುದಾಗಿ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News