ಜಯಪ್ರದಾ ವಿರುದ್ಧ ಹೇಳಿಕೆ: ಆಝಂ ಖಾನ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

Update: 2019-07-03 14:05 GMT

ರಾಮಪುರ್, ಜು.3: ನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಹಾಗೂ ಸಂಸದ ಆಝಂ ಖಾನ್ ವಿರುದ್ಧ ಇನ್ನೊಂದು ಎಫ್‍ಐಆರ್ ದಾಖಲಾಗಿದೆ.

ಜಯಪ್ರದಾ ಬೆಂಬಲಿಗ ಆಕಾಶ್ ಸಕ್ಸೇನಾ ಎಂಬವರು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಸೋಮವಾರ ದೂರು ನೀಡಿದ್ದರೆ, ಮಂಗಳವಾರ ಅದೇ ಠಾಣೆಯಲ್ಲಿ ಮುಸ್ತಫಾ ಹುಸೈನ್ ಎಂಬವರು ದೂರು ನೀಡಿದ್ದಾರೆ.

ಸ್ಥಳೀಯ ಕ್ರಿಕೆಟ್ ಪಂದ್ಯಾಟದ ಅಂಗವಾಗಿ ಜೂನ್ 29ರಂದು ನಡೆದ  ಸಮಾರಂಭದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಮೊದಲ ದೂರಿನಲ್ಲಿ ಆರೋಪಿಸಲಾಗಿತ್ತು.

ಆಝಂ ಖಾನ್ ಹೊರತಾಗಿ ಹತ್ತು ಮಂದಿ ಇತರರ ಹೆಸರುಗಳನ್ನೂ ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದ್ದು ಎಲ್ಲರ ವಿರುದ್ಧವೂ ಐಪಿಸಿ ಸೆಕ್ಷನ್ 294, 504 ಹಾಗೂ ಐಟಿ ಕಾಯಿದೆಯ ಸೆಕ್ಷನ್ 66 ಅನ್ವಯ ಪ್ರಕರಣ ದಾಖಲಾಗಿದೆ.

ಎರಡನೇ ದೂರಿನ ಪ್ರಕಾರ ಆಝಂ ಖಾನ್ ಅವರು ಜೂನ್ 30ರಂದು ಮೊರಾದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಪ್ರದಾ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಆಝಂ ಖಾನ್, ಎಸ್ ಟಿ ಹಸನ್ ಸಹಿತ ಏಳು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಆಝಂ ಖಾನ್ ಅವರು ಜಯಪ್ರದಾ  ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News