ಅಶ್ಲೀಲ ಜಾಹೀರಾತುಗಳನ್ನು ತಡೆಯಲು ಹೆಚ್ಚು ಪರಿಣಾಮಕಾರಿ ಕ್ರಮಗಳು ಅಗತ್ಯ: ಜಾವಡೇಕರ್

Update: 2019-07-03 14:41 GMT

ಹೊಸದಿಲ್ಲಿ, ಜು.3: ಮಾಧ್ಯಮಗಳಲ್ಲಿನ ಜಾಹೀರಾತುಗಳಲ್ಲಿಯ ಅಶ್ಲೀಲತೆಯನ್ನು ತಡೆಯಲು ಹೆಚ್ಚು ಪರಿಣಾಮಕಾರಿ ಕ್ರಮಗಳು ಅಗತ್ಯವಾಗಿವೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಶೂನ್ಯವೇಳೆಯಲ್ಲಿ ಎಸ್‌ಪಿ ಸದಸ್ಯ ರಾಮಗೋಪಾಲ್ ಯಾದವ್ ಅವರು ವ್ಯಕ್ತಪಡಿಸಿದ ಕಳವಳಗಳಿಗೆ ಉತ್ತರಿಸಿದ ಅವರು,ಈವರೆಗೆ 6,700 ದೂರುಗಳನ್ನು ನಿಭಾಯಿಸಲಾಗಿದೆ. ಆದರೂ ಈ ಪಿಡುಗಿಗೆ ಕಡಿವಾಣ ಹಾಕಲು ಹೆಚ್ಚು ಪರಿಣಾಮಕಾರಿಯಾದ ಕ್ರಮಗಳು ಅಗತ್ಯವಾಗಿವೆ ಎಂದು ತಾನು ಭಾವಿಸಿದ್ದೇನೆ ಎಂದರು. ಇದೊಂದು ಮಹತ್ವದ ವಿಷಯ ಎಂಬ ಯಾದವ್ ಅಭಿಪ್ರಾಯಕ್ಕೆ ಅವರು ಸಹಮತಿ ಸೂಚಿಸಿದರು.

 ಕೆಟ್ಟ ಪ್ರಭಾವಗಳಿಂದ ಸಂಸ್ಕೃತಿಯನ್ನು ರಕ್ಷಿಸಲು ಇಂತಹ ಜಾಹೀರಾತುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ಯಾದವ್, ವಿದ್ಯುನ್ಮಾನ ಮತ್ತು ನಿಯತಕಾಲಿಕಗಳು ಸೇರಿದಂತೆ ಮುದ್ರಣ ಮಾಧ್ಯಮಗಳಲ್ಲಿ ಅಶ್ಲೀಲ ಜಾಹೀರಾತುಗಳು ಹೆಚ್ಚುತ್ತಿವೆ. ವಿರಾಮದ ಸಮಯದಲ್ಲಿ ಇಂತಹ ಜಾಹೀರಾತುಗಳನ್ನು ತೋರಿಸುವುದರಿಂದ ಕುಟುಂಬದೊಂದಿಗೆ ಟಿವಿಯಲ್ಲಿ ಸುದ್ದಿ ಕಾರ್ಯಕ್ರಮಗಳನ್ನೂ ನೋಡುವುದು ಕಷ್ಟವಾಗಿದೆ. ದೇಶವು ಇಂದು ನೈತಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ನಗ್ನತೆ ಮತ್ತು ಮದ್ಯಪಾನ ಹೆಚ್ಚಾಗುತ್ತಲೇ ಇದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಅಶ್ಲೀಲತೆಯೇ ಕಾರಣವಾಗಿದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News