×
Ad

ಸರಕಾರದ ಈ ಯೋಜನೆಗೆ ಸೇನೆಯ ಬೆಂಬಲ

Update: 2019-07-03 20:16 IST

ಹೊಸದಿಲ್ಲಿ, ಜು.3: ಸೇವೆಯಿಂದ ನಿವೃತ್ತಗೊಂಡಿರುವ ತನ್ನ ಸಿಬ್ಬಂದಿಯ ಪಿಂಚಣಿಯನ್ನು ತೆರಿಗೆ ವ್ಯಾಪ್ತಿಗೊಳಪಡಿಸುವ ಸರಕಾರದ ನಿರ್ಧಾರಕ್ಕೆ ಸೇನೆಯು ಬುಧವಾರ ಸಹಮತವನ್ನು ವ್ಯಕ್ತಪಡಿಸಿದೆ. ಆದರೆ ಕರ್ತವ್ಯದ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ಗುರಿಯಾಗಿರುವ ಯೋಧರಿಗೆ ನೀಡಲಾಗುತ್ತಿರುವ ಪಿಂಚಣಿಗೆ ತಾನು ತೆರಿಗೆಯನ್ನು ವಿಧಿಸುವುದಿಲ್ಲ. ಆದರೆ ಈ ವಿನಾಯಿತಿಯು ನಿವೃತ್ತಿಯ ಬಳಿಕ ಅಂಗವೈಕಲ್ಯಕ್ಕೆ ಗುರಿಯಾಗಿ ಅಂಗವೈಕಲ್ಯ ಪಿಂಚಣಿಗೆ ಅನ್ವಯಿಸುವುದಿಲ್ಲ ಎಂದು ಸರಕಾರವು ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸರಣಿ ಸಂದೇಶಗಳನ್ನು ಪೋಸ್ಟ್ ಮಾಡಿರುವ ಸೇನೆಯು, ತೆರಿಗೆ ವಿನಾಯಿತಿಗಾಗಿ ಜೀವನಶೈಲಿ ಕಾಯಿಲೆಗಳಿಗೂ ಅಂಗವೈಕಲ್ಯ ಹಣೆಪಟ್ಟಿಯನ್ನು ಕೋರುತ್ತಿರುವುದಕ್ಕಾಗಿ ಅಪಾತ್ರ ಮಾಜಿ ಯೋಧರನ್ನು ಟೀಕಿಸಿದೆ. ಇದು ದೇಶದ ಎದುರಿನ ಸವಾಲುಗಳ ಹಿನ್ನೆಲೆಯಲ್ಲಿ ಚಿಂತೆಗೀಡು ಮಾಡುವ ಪ್ರವೃತ್ತಿಯನ್ನು ಬಿಂಬಿಸಿದೆ ಎಂದು ಅದು ಹೇಳಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿರುವ ಸಹಿ ಇಲ್ಲದ ಪತ್ರವೊಂದರಲ್ಲಿಯೂ ಸೇನೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುದ್ಧದಲ್ಲಿ ಗಾಯಗೊಂಡ ಯೋಧರು ಪ್ರದರ್ಶಿಸಿರುವ ಧೈರ್ಯ ಮತ್ತು ಶೌರ್ಯಗಳಿಗೆ ಕೇವಲ ಆರ್ಥಿಕ ಸಂಭಾವನೆಯ ಮೂಲಕವೇ ಪರಿಹಾರ ದೊರೆಯಬೇಕು ಎಂದು ಕೆಲವು ಹಿರಿಯ ಯೋಧರು ಭಾವಿಸಿದ್ದಾರೆ ಎಂದು ಅದು ಕುಟುಕಿದೆ.

 ಸರಕಾರದ ಕ್ರಮವು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಯೋಧರನ್ನು ಅಸಮಾಧಾನಗೊಳಿಸಿದೆ. 1971ರ ಯುದ್ಧದ ಸಂದರ್ಭ ಗ್ಯಾಂಗ್ರಿನ್ ಉಂಟಾಗುವುದನ್ನು ತಡೆಯಲು ತನ್ನ ಕಾಲನ್ನು ಕೈಯಾರೆ ಕತ್ತರಿಸಿಕೊಂಡಿದ್ದ ಮೇ.ಜ.ಇಯಾನ್ ಕಾರ್ಡೊಜೊರಂತಹ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾನಿಗಳನ್ನು ಅವರು ಬೆಟ್ಟು ಮಾಡಿದ್ದಾರೆ. ಆದರೆ,ಮೇ.ಜ.ಕಾರ್ಡೊಜೊ ಅವರು 1971ರ ಯುದ್ಧದ ಅತ್ಯಂತ ಗೌರವಾನ್ವಿತ ಯೋಧರಾಗಿದ್ದು,ಅವರ ಕಾರ್ಯಗಳು ಸೈನಿಕ ವೃತ್ತಿಯ ನಿಜವಾದ ಗುಣಲಕ್ಷಣಗಳ ದೃಷ್ಟಾಂತವಾಗಿವೆ. ಜೀವಂತ ದಂತಕಥೆಯಾಗಿರುವ ಅವರು ವೃತ್ತಿ ಮತ್ತು ಮಿಲಿಟರಿ ಕಟ್ಟುನಿಟ್ಟಿನ ನಡುವೆ ತನ್ನ ಅಂಗವೈಕಲ್ಯ ಪ್ರವೇಶಿಸಲು ಎಂದೂ ಅವಕಾಶ ನೀಡಿರಲಿಲ್ಲ ಎಂದು ಸೇನೆಯು ತನ್ನ ಟ್ವಿಟರ್ ಪತ್ರದಲ್ಲಿ ನಿವೃತ್ತ ಯೋಧರಿಗೆ ನೆನಪಿಸಿದೆ.

ಹಣವೊಂದೇ ಅಂಗವೈಕ್ಯಲ್ಯಕ್ಕೆ ಪರಿಹಾರವಲ್ಲ. ಸೇನೆಯಲ್ಲಿ ಅವರ ವೃತ್ತಿ ಜೀವನದಲ್ಲಿ ಮತ್ತು ನಿವೃತ್ತಿಯ ಬಳಿಕವೂ ಅವರಿಗೆ ಅಗತ್ಯ ಬೆಂಬಲವನ್ನು ಒದಗಿಸಲು ಸೇವೆಯು ಮುಂದುವರಿಯಬೇಕು. ಅಂಗವಿಕಲ ಯೋಧರಿಗಾಗಿ ಸರಕಾರವು ಒದಗಿಸುವ ಸೌಲಭ್ಯಗಳನ್ನು ಪಡೆದುಕೊಂಡಿರುವ ಕೆಲವು ನೀತಿರಹಿತ ಮಾಜಿ ಸಿಬ್ಬಂದಿಗಳು ಇದನ್ನು ಶೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ಅದು ಹೇಳಿದೆ.

ಸಾಮಾನ್ಯ ಪರಿಸ್ಥಿತಿಯಲ್ಲಿ ನಿವೃತ್ತರಾಗಿರುವ ಬಳಿಕ ವೈಕಲ್ಯಕ್ಕೆ ಗುರಿಯಾಗಿರುವ ಯೋಧರ ಅಂಗವೈಕಲ್ಯ ಪಿಂಚಣಿಗೆ ತೆರಿಗೆಯನ್ನು ವಿಧಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ತನ್ನ ಜೂ.24ರ ಸುತ್ತೋಲೆಯಲ್ಲಿ ತಿಳಿಸಿತ್ತು. ಆದರೆ ಕರ್ತವ್ಯದ ವೇಳೆ ಗಾಯಗೊಂಡು ಅಂಗವಿಕಲರಾದವರಿಗೆ ಹೆಚ್ಚುವರಿಯಾಗಿ ಪಾವತಿಸಲಾಗುವ ಅಂಗವೈಕಲ್ಯ ಪಿಂಚಣಿಯು ತೆರಿಗೆಮುಕ್ತವಾಗಿರುತ್ತದೆ ಎಂದು ಅದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News