ಉಪ ಕಾರ್ಯದರ್ಶಿ ಮತ್ತು ನಿರ್ದೇಶಕ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ 40 ತಜ್ಞರ ನೇಮಕಕ್ಕೆ ನಿರ್ಧಾರ
ಹೊಸದಿಲ್ಲಿ, ಜು.3: ಅಧಿಕಾರಶಾಹಿಯ ಶ್ರೇಣಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ಹಂತವೆಂದು ಪರಿಗಣಿಸಲಾಗಿರುವ ಉಪ ಕಾರ್ಯದರ್ಶಿ ಮತ್ತು ನಿರ್ದೇಶಕ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ 40 ತಜ್ಞರನ್ನು ನೇಮಕ ಮಾಡಿಕೊಳ್ಳಲು ಕೇಂದ್ರವು ನಿರ್ಧರಿಸಿದೆ ಎಂದು ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಸಾಮಾನ್ಯವಾಗಿ ಈ ಹುದ್ದೆಗಳಿಗೆ ಐಎಎಸ್‌ನಂತಹ ಗ್ರೂಪ್ ಎ ಸೇವೆಗಳ ಮೂಲಕ ಆಯ್ಕೆಯಾದವರು ಮತ್ತು ಕೇಂದ್ರ ಸಚಿವಾಲಯ ಸೇವೆಯಲ್ಲಿ ಪದೋನ್ನತಿಗೊಂಡ ಅಧಿಕಾರಿಗಳು ನೇಮಕಗೊಳ್ಳುತ್ತಾರೆ.
ನೀತಿ ಆಯೋಗವು 2017, ಫೆಬ್ರವರಿಯಲ್ಲಿ ಸಲ್ಲಿಸಿರುವ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಆಧರಿಸಿ ಉಪ ಕಾರ್ಯದರ್ಶಿ ಮತ್ತು ನಿರ್ದೇಶಕರ 40 ಹುದ್ದೆಗಳಿಗೆ ಹೊರಗಿನ ತಜ್ಞರನ್ನು ನೇಮಿಸಿಕೊಳ್ಳಲು ತಾತ್ವಿಕವಾಗಿ ನಿರ್ಧರಿಸಲಾಗಿದೆ. ಆದರೆ ಈ ವಿಷಯದಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಸಿಂಗ್ ತಿಳಿಸಿದರು.
ಸರಕಾರವು ಕೆಲವು ಪ್ರತಿಷ್ಠಿತ ವ್ಯಕ್ತಿಗಳ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಪರಿಗಣಿಸಿ ನಿರ್ದಿಷ್ಟ ಹುದ್ದೆಗಳಿಗೆ ಅಂತಹವರನ್ನು ಆಗಾಗ್ಗೆ ನೇಮಕ ಮಾಡುತ್ತಿರುತ್ತದೆ ಎಂದು ಸಿಂಗ್ ಇನ್ನೊಂದು ಉತ್ತರದಲ್ಲಿ ತಿಳಿಸಿದರು.
ನಾಗರಿಕ ಸೇವೆ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಲೋಕಸೇವಾ ಆಯೋಗವು ಈ ವರ್ಷದ ಎಪ್ರಿಲ್‌ನಲ್ಲಿ ಖಾಸಗಿ ಕ್ಷೇತ್ರದ ಒಂಭತ್ತು ತಜ್ಞರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆ ಮಾಡಿತ್ತು.
ಜಂಟಿಕಾರ್ಯದರ್ಶಿ ಹುದ್ದೆಗಳನ್ನು ಐಎಎಸ್,ಐಪಿಎಸ್‌ನಂತಹ ಅಧಿಕಾರಿಗಳು ನಿರ್ವಹಿಸುತ್ತಾರೆ.
ಸಿಬ್ಬಂದಿ ಸಚಿವಾಲಯವು ಕಳೆದ ವರ್ಷದ ಜೂನ್‌ನಲ್ಲಿ ಜಂಟಿ ಕಾರ್ಯದರ್ಶಿ ದರ್ಜೆ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು,ಒಟ್ಟು 6,077 ಅರ್ಜಿಗಳು ಬಂದಿದ್ದವು.