ಶಿಕ್ಷಕರ ಮೀಸಲಾತಿ ಮಸೂದೆಗೆ ರಾಜ್ಯಸಭಾ ಸದಸ್ಯರ ಬೆಂಬಲ

Update: 2019-07-03 14:49 GMT

ಹೊಸದಿಲ್ಲಿ, ಜು.3: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ಒದಗಿಸುವ ಉದ್ದೇಶದಿಂದ ಜಾರಿ ಮಾಡಲಾದ ಸುಗ್ರೀವಾಜ್ಞೆಯ ಬದಲಿಗೆ ರೂಪಿಸಲಾಗಿರುವ ಶಿಕ್ಷಕರ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಪಕ್ಷಾತೀತವಾಗಿ ಬೆಂಬಲ ದೊರಕಿದೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ (ಬೋಧಕರ ಹುದ್ದೆಗೆ ಮೀಸಲಾತಿ) ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸುವಲ್ಲಿ ವಿಳಂಬ ಮಾಡಿದೆ ಎಂದು ಕೆಲವು ಸದಸ್ಯರು ಕೇಂದ್ರ ಸರಕಾರವನ್ನು ದೂರಿದ್ದಾರೆ. ಪ್ರಸ್ತಾವಿತ ಮಸೂದೆಗೆ ತಿದ್ದುಪಡಿಯನ್ನು ತರಲು ಸಾಧ್ಯವಾಗುವಂತೆ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸುವುದಕ್ಕೂ ಮೊದಲು ಕನಿಷ್ಟ ಒಂದು ದಿನದ ಹಿಂದೆಯಾದರೂ ನೋಟಿಸ್ ನೀಡಬೇಕಿತ್ತು ಎಂದು ಕೆಲವು ಸದಸ್ಯರು ಅಭಿಪ್ರಾಯಿಸಿದ್ದಾರೆ. ಮಸೂದೆಯ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಅದಕ್ಕೆ ಬೆಂಬಲ ಸೂಚಿಸಿದ ಮನೋಜ್ ಝಾ, ಬಹುತೇಕ ಸಹಾಯಕ ಉಪನ್ಯಾಸಕ, ಸಹ ಉಪನ್ಯಾಸಕ ಮತ್ತು ಉಪನ್ಯಾಸಕ ಮಟ್ಟದಲ್ಲಿ ಶೇ.90ಕ್ಕೂ ಅಧಿಕ ಸಾಮಾನ್ಯ ವರ್ಗದ ಬೋಧಕರೇ ಇದ್ದಾರೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ 3.14 ಲಕ್ಷ ಉಪನ್ಯಾಸಕರ ಹುದ್ದೆ ಖಾಲಿಯಿದೆ ಮತ್ತು ದಿಲ್ಲಿಯಲ್ಲೇ 2,500 ಹುದ್ದೆಗಳು ಖಾಲಿಯಿವೆ ಎಂದು ಆಪ್‌ನ ಸುಶೀಲ್ ಗುಪ್ತಾ ತಿಳಿಸಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡುವಂತರ ಅವರು ಕೇಂದ್ರವನ್ನು ಆಗ್ರಹಿಸಿದ್ದಾರೆ. ಮಸೂದೆಯ ಬಗ್ಗೆ ವಿಳಂಬವಾಗಿ ಕ್ರಮ ತೆಗೆದುಕೊಂಡ ಕೇಂದ್ರ ಸರಕಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಈ ಮಸೂದೆಯನ್ನು 2016ರಲ್ಲೇ ಪರಿಚಯಿಸಬಹುದಿತ್ತು. ಆದರೆ ಚುನಾವಣೆಯ ದೃಷ್ಟಿಯಿಂದ 2019ರಲ್ಲಿ ಸುಗ್ರೀವಾಜ್ಞೆ ತರಲಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News