×
Ad

ಭಾರತೀಯ ಜ್ಞಾನ ಸಂಪತ್ತು ವಿಶ್ವಕ್ಕೆ ದೊರೆಯಲಿ: ಡಾ.ವೀರೇಂದ್ರ ಹೆಗ್ಗಡೆ

Update: 2019-07-03 20:39 IST

ಉಡುಪಿ, ಜು.3: ಭಾರತೀಯ ಜ್ಞಾನ ಸಂಪತ್ತು ಕೇವಲ ಮಠಗಳಲ್ಲಿ ಉಳಿಯದೆ ಇಡೀ ವಿಶ್ವದ ಉಪಯೋಗಕ್ಕೆ ಸಿಗಬೇಕಾಗಿದೆ. ನಮ್ಮ ಜ್ಞಾನದ ಮಹತ್ವವು ಇಡೀ ವಿಶ್ವಕ್ಕೆ ತೆರೆದು ಕೊಳ್ಳಬೇಕು. ಅದೇ ರೀತಿ ಜ್ಯೋತಿಷ್ಯದ ಮಹತ್ವ ಇಡೀ ವಿಶ್ವಕ್ಕೆ ತಿಳಿಸಬೇಕಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಉಡುಪಿ ಶ್ರೀಮನ್ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಜಂಟಿ ಆಶ್ರಯದಲ್ಲಿ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಆಯೋಜಿಸಲಾದ ಸಮಾರಂಭದಲ್ಲಿ ಜ್ಯೌತಿಷ ವಿಶ್ವಕೋಶದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಜ್ಯೋತಿಷದ ಮೇಲಿನ ನಂಬಿಕೆ ಹಾಗೂ ಕುತೂಹಲ ಇಂದು ಹೆಚ್ಚಾಗಿದೆ. ಜಗತ್ತಿನಾದ್ಯಂತ ಬೇರೆ ಬೇರೆ ಧರ್ಮದವರು ಇಂದು ಜ್ಯೋತಿಷ್ಯ ಅಧ್ಯಯನ ಮಾಡುತ್ತಿದ್ದಾರೆ. ಜ್ಯೋತಿಷ್ಯದಲ್ಲಿ ಭೌತಶಾಸ್ತ್ರ ಸೇರಿದಂತೆ ಅನೇಕ ವಿಚಾರಗಳು ಸೇರಿವೆ ಎಂದು ಅವರು ತಿಳಿಸಿದರು.

ಭಾರತಕ್ಕೆ ಆಂಗ್ಲರ ಪ್ರವೇಶದಿಂದ ಇಲ್ಲಿನ ಭಾಷೆ, ಸಂಸ್ಕೃತಿ, ಸಂಸ್ಕಾರ ನಾಶ ವಾಯಿತು. ನಮಗೆ ಅರಿವೇ ಇಲ್ಲದೆ ನಮ್ಮತನವನ್ನು ನಾವು ಕಳೆದು ಕೊಂಡೆವು. ವಿದ್ವಾಂಸರು, ವಿದ್ವತ್, ಪರಂಪರೆಯ ಜ್ಞಾನ ಮೂಲೆಗುಂಪಾಯಿತು. ಇದೀಗ ಮತ್ತೆ ಭಾರತೀಯ ಪರಂಪರೆಯ ಜ್ಞಾನ ವಿಶ್ವ ಮಾ್ಯತೆಯನ್ನು ಪಡೆಯುತ್ತಿದೆ ಎಂದರು.

ಜ್ಯೌತಿಷ ವಿಶ್ವಕೋಶ ಗ್ರಂಥವನ್ನು ಬಿಡುಗಡೆಗೊಳಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ನಮಗೆ ಗೊತ್ತಿರದ ವಿಷಯಗಳ ಬಗ್ಗೆ ಜ್ಯೋತಿಷ್ಯ ಬೆಳಕು ಚೆಲ್ಲುತ್ತದೆ. ಜ್ಯೋತಿಷದಲ್ಲಿ ಫಲ ಮತ್ತು ಗಣಿತ ಎಂಬ ಎರಡು ವಿಧಗಳಿದ್ದರೂ ನಮಗೆ ಫಲ ಮಾತ್ರ ಬೇಕು. ಆದರೆ ಗಣಿತ ಜ್ಯೋತಿಷ್ಯ ಬೇಡವಾಗಿದೆ. ಜ್ಯೋತಿಷ್ಯದಲ್ಲಿ ಎಲ್ಲ ವಿಚಾರಗಳು ಅಡಗಿವೆ ಎಂದು ಹೇಳಿದರು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಣಿಯೂರು ಮಠ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಮಾತನಾಡಿದರು. ಕೇಂದ್ರದ ಜ್ಯೌತಿಷ ವಿಭಾಗಾಧ್ಯಕ್ಷ ಪ್ರೊ.ಎಸ್.ಶ್ರೀನಿವಾಸ ಅಡಿಗ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಯಶೋವರ್ಮ, ಮಠದ ದಿವಾನ ವೇದವ್ಯಾಸ ತಂತ್ರಿ, ಕೇಂದ್ರದ ವೇದಾದಂತ ವಿಭಾಗದ ಅಧ್ಯಕ್ಷ ಸಗ್ರಿ ರಾಘವೇಂದ್ರ ಆಚಾರ್ಯ, ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್, ನಿರ್ದೇಶಕ ಕಡಂಲೆ ಗಣಪತಿ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News