ಮುಸ್ಲಿಂ ಸಮುದಾಯದ ನಿರ್ಲಕ್ಷ: ರಾಜ್ಯ ಸರಕಾರಕ್ಕೆ ಮನವಿ
ಉಡುಪಿ, ಜು.3: ಉಡುಪಿ ಜಿಲ್ಲೆಯ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ ಸಮುದಾಯವನ್ನು ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನಿರಂತರವಾಗಿ ನಿರ್ಲಕ್ಷಿಸುತ್ತಿದ್ದು ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊದಿನಬ್ಬ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಉಭಯ ನಾಯಕರಿಗೂ ಮನವಿಯೊಂದನ್ನು ಸಲ್ಲಿಸಿ, ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳ ಅಭಿವೃದ್ಧಿಗೆ ಸರಕಾರದ ಅನುದಾನ ಕೋರಿ ಬಹಳಷ್ಟು ಸಂಸ್ಥೆಗಳು ಅರ್ಜಿ ಸಲ್ಲಿಸಿ ಒಂದೂವರೆ ವರ್ಷಗಳಾದರೂ ಈವರೆಗೂ ಅನುದಾನ ಬಿಡುಗಡೆಗೊಳಿಸದೆ ಬಡ ವಕ್ಫ್ ಸಂಸ್ಥೆಗಳಿಗೆ ಈ ಇಲಾಖೆಯು ತೊಂದರೆ ಮಾಡಿದೆ. ಸಂಬಂಧಿತ ವಕ್ಫ್ ಖಾತೆ ಸಚಿವರು ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಸಲ್ಲಿಸಲ್ಪಟ್ಟ ಪ್ರಸ್ತಾವನೆ ಗಳಿಗೆ ಮಂಜೂರಾತಿ ನೀಡಿದ್ದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಕಡತವನ್ನು ತನ್ನಲ್ಲೇ ಉಳಿಸಿಕೊಂಡಿರುವುದು ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ದೂರಿದ್ದಾರೆ.
ಕಾರ್ಕಳ ಹಾಗೂ ಉಡುಪಿ ತಾಲೂಕುಗಳಲ್ಲಿ ಸುಮಾರು 162 ಎಕ್ರೆಯಷ್ಟು ವಕ್ಫ್ ಭೂಮಿ ಕಬಳಿಕೆಯಾಗಿದ್ದು , ಕೂಡಲೇ ಈ ಭೂಮಿಗಳನ್ನು ಮಂಡಳಿಯ ಸ್ವಾಧೀನಕ್ಕೆ ಒಪ್ಪಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಾಲನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಲಕ್ಷ ರೂ. ಅನುದಾನ ಒದಗಿಸುವ ಯೋಜನೆೆ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ಕಾರಿಯಾಗಿರುವುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ ಶಾಸಕರ ನೇತೃತ್ವದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಕನಿಷ್ಟ 5 ಮಂದಿ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಕಾಮಗಾರಿಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಈ ಸಮಿತಿಗೆ ನೀಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.