​ಜು.5: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಂದ ಪ್ರತಿಭಟನೆ

Update: 2019-07-03 15:33 GMT

ಉಡುಪಿ, ಜು.3: ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾದ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜು.5ರ ಶುಕ್ರವಾರ ಬೃಹತ್ ಜಾಥಾ ಹಾಗೂ ಪ್ರತಿಭಟನೆ ನಡೆಯಲಿದೆ.

ಬುಧವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರವಿ ಎಸ್. ಪೂಜಾರಿ ಬೈಕಾಡಿ ಅವರು ಈ ವಿಷಯ ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ 1ರಿಂದ 7-8ನೇ ತರಗತಿಗಳಿಗೆ ಬೋಧಿಸುವ ವರು. 2017ರ ಆಗಸ್ಟ್ ತಿಂಗಳಲ್ಲಿ ಜಾರಿಯಾದ ಹೊಸ ವೃಂದ ಮತ್ತು ನೇಮಕಾತಿ ನಿಯಮದಂತೆ 1ರಿಂದ 7-8ನೇ ತರಗತಿಗೆ ಬೋಧಿಸುತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ನಿಗದಿ ಪಡಿಸಿ ಹಿಂಬಡ್ತಿ ನೀಡಲಾಗಿದೆ ಎಂದವರು ವಿವರಿಸಿದರು.

ಇದರಿಂದ ರಾಜ್ಯದ ಸುಮಾರು 82,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದೆ. ಅದರಲ್ಲೂ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿರತರಾಗಿರುವ ಪದವೀಧರ ಶಿಕ್ಷಕರಿಗೆ ವಿಶೇಷ ಅನ್ಯಾಯವಾಗಿದೆ. ಅಲ್ಲದೇ ಇದರಿಂದ 50,000ಕ್ಕೂ ಅಧಿಕ ಹೆಚ್ಚುವರಿ ಶಿಕ್ಷಕರು ಎನಿಸಿಕೊಂಡಿದ್ದಾರೆ ಎಂದರು.

ಈಗಾಗಲೇ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 15ರಿಂದ 20 ವರ್ಷಗಳ ಕಾಲ 5ರಿಂದ 7-8ನೇ ತರಗತಿಗಳಲ್ಲಿ ಕಲಿಸಿರುವ ಪದವೀಧರ ಶಿಕ್ಷಕರು ಈಗ 1ರಿಂದ 5ನೇ ತರಗತಿಗಳಿಗೆ ಕಲಿಸಬೇಕಾಗಿದೆ. ಇದಕ್ಕೆ ಬದಲು ಇವರನ್ನು ಹೊಸ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಬೇಕು ಎಂಬುದು ತಮ್ಮ ಒತ್ತಾಯವಾಗಿದೆ ಎಂದರು.

ಈ ಅನ್ಯಾಯವನ್ನು ಖಂಡಿಸಿ ಹಾಗೂ ಸೇವಾನಿರತ ಪದವೀಧರ ಶಿಕ್ಷಕರನ್ನು ಹೊಸತಾಗಿ ಸಿದ್ಧಗೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ) ವೃಂದಕ್ಕೆ ವಿಲೀನಗೊಳಿಸಬೇಕೆಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ರವಿ ಪೂಜಾರಿ ತಿಳಿಸಿದರು.

ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘದ ವತಿಯಿಂದ ಜು.5ರ ಶುಕ್ರವಾರ ಅಪರಾಹ್ನ 2 ಗಂಟೆಗೆ ಬೃಹತ್ ಜಾಥಾ ಮತ್ತು ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದೇವೆ. ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಜಾಥಾ ನಡೆಸಿ ಅಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ಬಳಿಕ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆ ಗಳನ್ನೊಳಗೊಂಡ ಮನವಿಯನ್ನು ಸಲ್ಲಿಸ ಲಾಗುವುದು ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಹಾವಂಜೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ವಾಕುಡ, ಕೋಶಾಧಿಕಾರಿ ಸತೀಶ್ ಪೂಜಾರಿ ವಡ್ಡರ್ಸೆ, ತಾಲೂಕು ಅಧ್ಯಕ್ಷರಾದ ಮಂಜುನಾಥ ದೇವಾಡಿಗ, ಭಾಸ್ಕರ ಪೂಜಾರಿ ಹಾಗೂ ಸವಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News