ಮಣಿಪಾಲ ವಿಷ ಪತ್ತೆ ಕೇಂದ್ರಕ್ಕೆ ಡಬ್ಲುಎಚ್‌ಓ ಮಾನ್ಯತೆ

Update: 2019-07-03 15:35 GMT

ಮಣಿಪಾಲ, ಜು.3: 2015ರ ಮಾ.20ರಿಂದ ಕಾರ್ಯಾಚರಿಸುತ್ತಿರುವ ಮಣಿಪಾಲದ ವಿಷ ಪತ್ತೆ ಕೇಂದ್ರಕ್ಕೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ)ಯಿಂದ ಮಾನ್ಯತೆ ದೊರೆತಿದೆ.

ಈ ಕೇಂದ್ರವು ವಿಷದ ತಡೆ, ಪತ್ತೆ ಹಾಗೂ ನಿರ್ವಹಣೆಯಲ್ಲಿ ನಡೆಸುತ್ತಿರುವ ವಿಶೇಷ ಸೇವೆಯನ್ನು ಪರಿಗಣಿಸಿ ಸಂಸ್ಥೆ ಈ ಮಾನ್ಯತೆಯನ್ನು ನೀಡಿದೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರಕಟಣೆಯಲ್ಲಿ ತಿಳಿಸಿದೆ.

ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರ್ನಾಟಕ, ಕೇರಳ ಹಾಗೂ ಆಂಧ್ರ ಪ್ರದೇಶಗಳ ದೊಡ್ಡ ಸಂಖ್ಯೆಯ ವಿಷ ಸೇವಿಸಿದವರ ಹಾಗೂ ಮಾದಕದ್ರವ್ಯ ಸೇವಿಸಿದ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿರುವುದರಿಂದ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಸುಸಜ್ಜಿತ, ಅತ್ಯಾಧುನಿಕ ವಿಷ ಪತ್ತೆ ಕೇಂದ್ರವನ್ನು ತೆರೆಯಲಾಗಿತ್ತು. ಈಗಾಗಲೇ ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

ವಿಷದ ಪತ್ತೆ, ಶೀಘ್ರವೇ ಅದರ ಪರಿಣಾಮದ ತಡೆ ಹಾಗೂ ಸೂಕ್ತ ಚಿಕಿತ್ಸೆಗಾಗಿ ಬಯೋಕೆಮೆಸ್ಟ್ರಿ, ಫೋರೆನ್ಸಿಕ್ ಮೆಡಿಸಿನ್ ಹಾಗೂ ಟಾಕ್ಸಿಕಾಲಜಿ ಎಂಡ್ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಸಹಯೋಗದೊಂದಿಗೆ ಅನಾಲಟಿಕಲ್ ಟಾಕ್ಸಿಕಾಲಜಿ ವಿಂಗ್‌ನ್ನು ತೆರೆಯಲಾಗಿತ್ತು.

ಭಾರತದಲ್ಲಿ ವಿವಿಧ ರೀತಿಯ ವಿಷದ ಪ್ರಕರಣಗಳು ವಿಶ್ವದಲ್ಲೇ ಅತ್ಯಧಿಕವಾಗಿದ್ದು, ವಿಷ ಸೇವನೆ ಹಾಗೂ ಇತರ ವಿಷಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಭಾರತದಲ್ಲಿ ಪ್ರತಿ ವರ್ಷ 50,000ಕ್ಕೂ ಅಧಿಕ ಮಂದಿ ಸಾವನ್ನಪ್ಪುತಿದ್ದಾರೆ.

ಮಣಿಪಾಲದ ವಿಷ ಪತ್ತೆ ಕೇಂದ್ರವು ಕರ್ನಾಟಕ ಕೃಷಿ ಆಯೋಗದ ಸಹಯೋಗದೊಂದಿಗೆ ಸುಮಾರು 15 ಲಕ್ಷ ರೂ.ಅನುದಾನದಲ್ಲಿ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ರೈತರಿಗಾಗಿ ವಿಷಕಾರಿ ರಾಸಾಯನಿಕಗಳ ಕುರಿತಂತೆ ಆರೋಗ್ಯ ಮಾಹಿತಿ ಶಿಬಿರಗಳನ್ನು ಆಯೋಜಿಸಿದ್ದಲ್ಲದೇ, ಅಲ್ಲಿನ ಸುಮಾರು 800 ರೈತರ ಆರೋಗ್ಯ ತಪಾಸಣೆಯನ್ನೂ ನಡೆಸಿತ್ತು.

ಕೇಂದ್ರದ ಉತ್ತಮ ಕಾರ್ಯವನ್ನು ಪರಿಗಣಿಸಿ ಡಬ್ಲುಎಚ್‌ಓ, ಮಣಿಪಾಲ ವಿಷ ಪತ್ತೆ ಕೇಂದ್ರಕ್ಕೆ ಮಾನ್ಯತೆಯನ್ನು ನೀಡಿ, ತನ್ನ ವೆಬ್‌ಸೈಟ್‌ನಲ್ಲಿ ವಿಶ್ವದ ವಿಷ ಪತ್ತೆ ಕೇಂದ್ರಗಳ ಪಟ್ಟಿಯಲ್ಲಿ ಇದಕ್ಕೂ ಸ್ಥಾನವನ್ನು ನೀಡಿದೆ. ಈ ಮಾನ್ಯತೆ ದೊರೆತ ದ್ಯೋತಕವಾಗಿ ಇತ್ತೀಚೆಗೆ ಮಾಹೆಯ ಕುಲಪತಿ ಡಾ.ವಿನೋದ್ ಭಟ್ ಅವರು ಬಯೋಕೆಮೆಸ್ಟ್ರಿ ಡೆಮೋ ಹಾಲ್‌ನಲ್ಲಿ ಫಲಕವನ್ನು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News