ವೈದ್ಯರು ಆತಂಕದಿಂದ ವೃತ್ತಿ ನಡೆಸುವ ಸ್ಥಿತಿ ಇದೆ: ಡಾ.ಕೃಷ್ಣ ಪ್ರಸಾದ್
ಉಡುಪಿ, ಜು. 3: ಅತ್ಯಂತ ನಿಸ್ವಾರ್ಥ ಮತ್ತು ಸೇವಾ ಭಾವನೆಯಿಂದ ಹಗಲಿರುಳು ದುಡಿಯುವ ವೈದ್ಯರು ಇಂದು ಆತಂಕದಿಂದ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರನ್ನು ದೇವರೆಂದು ಗೌರವ ಭಾವನೆಯಿಂದ ನೋಡುವ ಕಾಲ ಹೋಗಿದೆ. ಅನ್ಯರ ಪ್ರಾಣ ಉಳಿಸಲು ಹೋರಾಟ ಮಾಡುವ ಜೀವಗಳು ಇಂದು ತನ್ನ ಜೀವವನ್ನು ಅಂಗೈಯಲ್ಲಿ ಇಟ್ಟು ವೃತ್ತಿ ಮಾಡುವ ಕಾಲ ಬಂದಿದೆ ಎಂದು ಪ್ರಸಿದ್ಧ ನೇತ್ರತಜ್ಞ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ.ಕೆ. ಕೃಷ್ಣಪ್ರಸಾದ್ ಹೇಳಿದ್ದಾರೆ.
ಉಡುಪಿ ಪ್ರಸಾದ ನೇತ್ರಾಲಯ ಸಭಾಂಗಣದಲ್ಲಿ ರೋಟರಿ ಕ್ಲಬ್ ಉಡುಪಿ ರಾಯಲ್ಸ್ ಮತ್ತು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಮಣಿಪಾಲ ಎಂಐಟಿಯ ಉಪನ್ಯಾಸಕ ಅಂತಾರಾಷ್ಟ್ರೀಯ ರೋಟರಿ ದಕ್ಷಿಣ ಏಷ್ಯಾದ ತಾಂತ್ರಿಕ ಸಲಹೆಗಾರ ಡಾ. ಬಾಲಕೃಷ್ಣ ಮದ್ದೋಡಿ ಮಾತನಾಡಿ, ವೈದ್ಯರುಗಳ ಮೇಲಿನ ಹಲ್ಲೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವ ಎಲ್ಲರ ಮನೋಬಲ ಹೆಚ್ಚಿಸಲು ಅವನ್ನು ಬೆಂಬಲಿಸ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರದ ವಿವಿಧ ಆಸ್ಪತ್ರೆಗಳ ಪ್ರಸಿದ್ಧ ವೈದ್ಯರಾದ ಡಾ.ಕೆ.ಕೃಷ್ಣ ಪ್ರಸಾದ್, ಡಾ.ಚಿನ್ನಪ್ಪಎ.ಜಿ., ಡಾ. ಪರೇಶ್ ಪೂಜಾರಿ, ಡಾ. ಸುರೇಶ ಶೆಣೈ, ಡಾ.ನಿತ್ಯಾನಂದ ನಾಯಕ್, ಡಾ.ಗಣಪತಿ ಹೆಗ್ಡೆ, ಡಾ. ಹರಿಪ್ರಸಾದ್ ಒಕಡೆ, ಡಾ.ಶರತ್ ಹೆಗ್ಡೆ, ಡಾ. ರಾಜಗೋಪಾಲ್ ಭಂಡಾರಿ, ಡಾ.ಧನಂಜಯ್ ಮುಂತಾದವರನ್ನು ಸನ್ಮಾನಿಸಲಾಯಿತು.
ನೇತ್ರಜ್ಯೋತಿ ಚಾರಿಟೇಬಲ್ನ ನಿರ್ದೇಶಕ ರಘುರಾಮ್ ರಾವ್, ರೋಟರಿ ಕ್ಲಬ್‌ನ ಡಾ. ಸುರೇಶ ಶೆಣೈ, ದಿನೇಶ್ ಹೆಗ್ಡೆ ಅತ್ರಾಡಿ,. ಪ್ರಸಾದ್ ನೇತ್ರಾಲಯದ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ರಾಯಲ್ಸ್ ಅಧ್ಯಕ್ಷ ಯಶವಂತ್ ಬಿ.ಕೆ. ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ವಂದಿಸಿ ಆಸ್ಪತ್ರೆಯ ಆಡಳಿತಾಧಿಕಾರಿ ಎಂ ವಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.