ಸಂಸತ್ತಿನಲ್ಲಿ ಪಶ್ಚಿಮಬಂಗಾಳವನ್ನು ಅನಗತ್ಯ ಗುರಿ ಮಾಡಲಾಗುತ್ತಿದೆ: ತೃಣಮೂಲ ಕಾಂಗ್ರೆಸ್

Update: 2019-07-03 16:11 GMT

ಹೊಸದಿಲ್ಲಿ, ಜು. 3: ಇತರ ರಾಜ್ಯಗಳಲ್ಲಿ ಹಿಂಸಾಚಾರದ ಹಲವು ಉದಾಹರಣೆಗಳ ಹೊರತಾಗಿ ಸಂಸತ್ತಿನಲ್ಲಿ ಅನಗತ್ಯವಾಗಿ ಪಶ್ಚಿಮಬಂಗಾಳವನ್ನು ಗುರಿ ಮಾಡಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಮಂಗಳವಾರ ಹೇಳಿದೆ.

ಸಂಸತ್ತು ಪಶ್ಚಿಮಬಂಗಾಳದ ಕಾನೂನು ಹಾಗೂ ಸುವ್ಯವಸ್ಥೆ ಕುರಿತ ಚರ್ಚೆಯ ವೇದಿಕೆಯಾಗಿ ಪರಿವರ್ತನೆಯಾಗುತ್ತಿರುವುದು ಅಚ್ಚರಿ ಹಾಗೂ ವಿಷಾದನೀಯ. ಉತ್ತರಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳು ನಿಯಂತ್ರಣ ರಹಿತ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರೂ ಪಶ್ಚಿಮ ಬಂಗಾಳವನ್ನು ಮಾತ್ರ ಚರ್ಚೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಟಿಎಂಸಿ ಹೇಳಿಕೆ ತಿಳಿಸಿದೆ.

ಪಶ್ಚಿಮಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಕೆಲವು ಬಿಡಿ ಘಟನೆಗಳು ನಡೆದಿರಬಹುದು. ಅದನ್ನು ಕಾನೂನಿನ ಅನ್ವಯ ನಿಯಂತ್ರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

‘‘ಭಾರತದ ಸಂವಿಧಾನದಲ್ಲಿ ಕಾನೂನು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಈ ಸಾಂವಿಧಾನಿಕ ಕಡ್ಡಾಯ ಕಾರ್ಯವನ್ನು ಪಶ್ಚಿಮಬಂಗಾಳ ಸರಕಾರ ನಿರ್ವಹಿಸಬೇಕು. ಲೋಕಸಭೆ ಚುನಾವಣೆಯ ಸಂದರ್ಭ ಹಾಗೂ ಅನಂತರ ರಾಜ್ಯದಲ್ಲಿ ಕೆಲವು ಅಹಿತಕರ ಹಾಗೂ ಆಕಸ್ಮಿಕ ಘಟನೆಗಳು ಸಂಭವಿಸಿವೆ. ಈ ಘಟನೆಗಳನ್ನು ರಾಜ್ಯ ಸರಕಾರ ಕಾನೂನಿನ ಅಡಿಯಲ್ಲಿ ನಿಯಂತ್ರಿಸಿದೆ’’ ಎಂದು ಅದು ಹೇಳಿದೆ.

 ‘‘ಲೋಕಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಇರುತ್ತದೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳುವ ಬಾಧ್ಯತೆ ಹಾಗೂ ಈ ಬಾಧ್ಯತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಅರಿವಿದೆ’’ ಎಂದು ತೃಣಮೂಲ ಕಾಂಗ್ರೆಸ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News