ನಾಡಿದ್ದು ಶರಣಾಗುವ ಸರವಣ ಭವನದ ರಾಜಗೋಪಾಲ್ ಗೆ ಆಜೀವ ಜೈಲು

Update: 2019-07-03 16:30 GMT

ಚೆನ್ನೈ, ಜು 3 : ಇದೊಂದು ಅಸಾಮಾನ್ಯ ದುರಂತ ಕತೆ. ಸುಮಾರು ಮೂರು ದಶಕಗಳ ಹಿಂದೆ ಅಂದಿನ ಮದ್ರಾಸ್ ನಲ್ಲಿ ಒಂದು ಸಾಮಾನ್ಯ ಹೋಟೆಲ್ ತೆರೆದ ವ್ಯಕ್ತಿಯೊಬ್ಬ 2019 ರಲ್ಲಿ ವಿಶ್ವದಲ್ಲೇ ಅತಿದೊಡ್ಡ ದಕ್ಷಿಣ ಭಾರತೀಯ ತಿಂಡಿಗಳ ಹೋಟೆಲ್ ಸರಣಿಯ ಮಾಲಕನಾಗುತ್ತಾನೆ.

ದೇಶವಿದೇಶಗಳಲ್ಲಿ ಆತನ ಹೋಟೆಲ್ ಬ್ರ್ಯಾಂಡ್ ಖ್ಯಾತಿ ಗಳಿಸುತ್ತದೆ. ಸಾವಿರಾರು ಕೋಟಿ ರೂಪಾಯಿಯ ಒಡೆಯನಾಗುತ್ತಾನೆ. ಸಾವಿರಾರು ಮಂದಿಗೆ ಉದ್ಯೋಗದಾತನಾಗುತ್ತಾನೆ. ಇಷ್ಟೆಲ್ಲಾ ಸಾಧಿಸಿದ ಮೇಲೆ  ಕೊನೆಗೆ ತನ್ನ ಒಂದು ದೌರ್ಬಲ್ಯದಿಂದಾಗಿ ಸಾಯುವವರೆಗೆ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿಗೆ ತಲುಪುತ್ತಾನೆ  ! 

ಇದು ಸಿನಿಮಾ ಕತೆಯಲ್ಲ. ನಿಜ ಜೀವನದಲ್ಲಿ ನಡೆದ ಕತೆ. ವಿಶ್ವವಿಖ್ಯಾತ ಹೋಟೆಲ್ ಸಮೂಹ ಸರವಣ ಭವನದ ಮಾಲಕ ಪಿ. ರಾಜಗೋಪಾಲ್ ಅವರ ದುರಂತ ಕಥನ.

ದೈವಭಕ್ತಿಯುಳ್ಳ ನೀರುಳ್ಳಿ ವ್ಯಾಪಾರಿಯೊಬ್ಬರ ಮಗ ರಾಜಗೋಪಾಲ್ 1981ರಲ್ಲಿ ಒಂದು ಹೋಟೆಲ್ ಪ್ರಾರಂಭಿಸುತ್ತಾರೆ. ಅಂದಿನ ದಿನಗಳಲ್ಲಿ ಜನರು ಹೋಟೆಲ್ ಗೆ ಹೋಗಿ ತಿನ್ನುವುದೇ ಅಪರೂಪ. ಆದರೂ ಧೈರ್ಯದಿಂದ ಆ ಸಾಹಸಕ್ಕೆ ಇಳಿಯುತ್ತಾರೆ ರಾಜಗೋಪಾಲ್. ಹೋಟೆಲ್ ವಿಶೇಷತೆ - ರುಚಿರುಚಿಯಾದ ದೋಸೆ, ಇಡ್ಲಿ, ವಡೆ ಇತ್ಯಾದಿ ದಕ್ಷಿಣ ಭಾರತೀಯ ತಿನಿಸುಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ. ಮಧ್ಯಮವರ್ಗದ, ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಜೇಬಿಗೆ ಹೊರೆಯಾಗದೆ  ಹೊರಗೆ ಹೋಗಿ ಹಾಯಾಗಿ ತಿಂದು ಬರಲು ಸುಲಭ ದಾರಿಯಾಯಿತು ಸರವಣ ಭವನ.

ಹೀಗೆ ಪ್ರಾರಂಭವಾದ ರಾಜಗೋಪಾಲ್ ಅವರ ಹೋಟೆಲ್ ಪಯಣ ಇಂದು ಭಾರತದಲ್ಲಿ 33 ಕಡೆ ಹಾಗು ವಿಶ್ವದ ವಿವಿಧೆಡೆ ಸುಮಾರು 47 ಕ್ಕೂ ಹೆಚ್ಚು ಹೋಟೆಲ್ ಸ್ಥಾಪನೆಯಾಗುವಲ್ಲಿ ಬಂದು ನಿಂತಿದೆ. ಸುಮಾರು 9000 ಜನರಿಗೆ ಉದ್ಯೋಗ ಕಲ್ಪಿಸಿರುವ ಈ ಹೋಟೆಲ್ ಸಮೂಹ ಇವತ್ತು ಸುಮಾರು 3000 ಕೋಟಿ ಮೌಲ್ಯ ಪಡೆದಿವೆ ಎನ್ನುತ್ತವೆ ಮೂಲಗಳು . 

ಆದರೆ ಎಲ್ಲ ಚೆನ್ನಾಗಿ ಹೋಗುತ್ತಿರುವಾಗ ರಾಜಗೋಪಾಲ್ 2000ದ ದಶಕದಲ್ಲಿ ಒಂದು ತಪ್ಪು ಹೆಜ್ಜೆ ಇಡುತ್ತಾರೆ. ತನ್ನ ಸಮೂಹದ ಉದ್ಯೋಗಿಯೊಬ್ಬರ ಮಗಳ ಮೇಲೆ ಅವರ ಕಣ್ಣು ಬೀಳುತ್ತದೆ. ಸಾಲದ್ದಕ್ಕೆ ಅವಳನ್ನು ನೀನು ನಿನ್ನ ಮೂರನೇ ಪತ್ನಿಯಾಗಿಸು ಎಂದು ಜ್ಯೋತಿಷಿಯೊಬ್ಬ ಸಲಹೆ ನೀಡುತ್ತಾನೆ.

ಸಾಧನೆ, ಹಣ, ಪ್ರಭಾವದ ಭ್ರಮೆಯಲ್ಲಿ ಬಿದ್ದ ರಾಜಗೋಪಾಲ್ ಜ್ಯೋತಿಷಿಯ ಮಾತು ಕೇಳಿ ಆ ಮಹಿಳೆಯ ಬೆನ್ನು ಬೀಳುತ್ತಾರೆ. ಆದರೆ ಆಕೆಗೆ ಮದುವೆಯಾಗಿ ಸಂಸಾರ ಇದೆ ಎಂಬುದನ್ನು ಕಡೆಗಣಿಸುತ್ತಾರೆ. ಆಕೆಗಾಗಿ ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಇಲ್ಲದ ಕಾಟ ಕೊಡುತ್ತಾರೆ. ಕೊನೆಗೆ 2001 ರಲ್ಲಿ ಆಕೆಯ ಪತಿಯನ್ನು ಕೊಲೆ ಮಾಡಿಸಿಬಿಡುತ್ತಾರೆ ! 

2004 ರಲ್ಲಿ ಅಪರಾಧ ಸಾಬೀತಾಗಿ ಮೊದಲು ಹತ್ತು ವರ್ಷ ಜೈಲಾಗುತ್ತದೆ. ಬಳಿಕ ಮತ್ತೆ ಆಜೀವ ಜೈಲಾಗುತ್ತದೆ. ಈಗ ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್ ಕೂಡ ಆ ಶಿಕ್ಷೆಯನ್ನು ಎತ್ತಿಹಿಡಿಯುತ್ತದೆ. ಜುಲೈ 7 ರಂದು ಸರವಣ ಭವನದ ರಾಜಗೋಪಾಲ್ ಶರಣಾಗಲು ಅಂತಿಮ ಗಡು . ಆ ಬಳಿಕ ಅವರು ಕೊನೆಯುಸಿರಿನವರೆಗೆ ಕಂಬಿ ಹಿಂದೆ ಕಳೆಯಬೇಕು. 

ಕಠಿಣ ಪರಿಶ್ರಮ ಹಾಗು ಹೊಸ ಐಡಿಯಾ ಇದ್ದರೆ ವ್ಯಕ್ತಿ ಎಲ್ಲಿಗೂ ತಲುಪಬಹುದು ಎಂಬುದಕ್ಕೆ ರಾಜಗೋಪಾಲ್ ಅತ್ಯುತ್ತಮ ನಿದರ್ಶನ. ಆದರೆ ಮಹಿಳೆಯರ ಕುರಿತ ಅವರ ದೌರ್ಬಲ್ಯ ಹಾಗು ಹಣ, ಪ್ರಭಾವದ ಭ್ರಮೆ ಅವರನ್ನು ಅಧಪತನದತ್ತ ಕೊಂಡೊಯ್ಯಿತು ಎನ್ನುತ್ತಾರೆ ಹಿರಿಯ ಪತ್ರಕರ್ತ ಜಿ ಸಿ ಶೇಖರ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News