ಅಸ್ಸಾಂ ಬಳಿಕ ‘ಘೋಷಿತ ವಿದೇಶಿಯ’ರಿಗಾಗಿ ಬಂಧನ ಕೇಂದ್ರ ಸ್ಥಾಪಿಸಲಿದೆ ಕರ್ನಾಟಕ

Update: 2019-07-03 16:39 GMT

ಹೊಸದಿಲ್ಲಿ, ಜು.3: ಮುಖ್ಯವಾಗಿ ಬಾಂಗ್ಲಾದೇಶಕ್ಕೆ ‘ಘೋಷಿತ ವಿದೇಶಿಯ’ರ ಗಡಿಪಾರು ಕುರಿತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಅಸ್ಸಾಮಿನ ಆರು ಬಂಧನ ಕೇಂದ್ರಗಳಲ್ಲಿ ಅವರ ವಿಸ್ತರಿತ ಬಂಧನ ಕುರಿತು ಅರ್ಜಿಯ ವಿಚಾರಣೆಯು ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೇ ವೇಳೆ ಕರ್ನಾಟಕವು ರಾಜ್ಯದಲ್ಲಿ ದಾಖಲೆಗಳಿಲ್ಲದೆ ನೆಲೆಸಿದ್ದಕ್ಕಾಗಿ ವಶಕ್ಕೆ ತೆಗೆದುಕೊಂಡಿರುವ ಅಕ್ರಮ ವಲಸಿಗರನ್ನು ಇರಿಸಲು ಬಂಧನ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಇದರೊಂದಿಗೆ ಅಸ್ಸಾಂ ನಂತರ ಇಂತಹ ಕೇಂದ್ರವನ್ನು ಹೊಂದಿರುವ ಎರಡನೇ ರಾಜ್ಯವಾಗಲಿದೆ.

ಕರ್ನಾಟಕವು ಅಕ್ರಮ ವಲಸಿಗರನ್ನಿರಿಸಲು ಯಾವುದೇ ಬಂಧನ ಕೇಂದ್ರವನ್ನು ಸ್ಥಾಪಿಸುತ್ತಿದೆಯೇ ಎಂಬ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ (ಬಿಜೆಪಿ) ಅವರ ಪ್ರಶ್ನೆಗೆ ಮಂಗಳವಾರ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಈ ವಿಷಯವನ್ನು ದೃಢಪಡಿಸಿದ್ದಾರೆ.

ತಾನು ಬಂಧನ ಕೇಂದ್ರ ಸ್ಥಾಪನೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದಾಗಿ ಕರ್ನಾಟಕ ಸರಕಾರವು ಕೇಂದ್ರಕ್ಕೆ ಮಾಹಿತಿಯನ್ನು ನೀಡಿದೆ. ಈ ಉದ್ದೇಶಕ್ಕಾಗಿ ಅಗತ್ಯ ಪೊಲೀಸ್ ಸಿಬ್ಬಂದಿ ಮತ್ತು ಇತರ ಮೂಲಸೌಕರ್ಯಗಳನ್ನು ಹಂಚಿಕೆ ಮಾಡಲಾಗಿದೆ ಮತ್ತು ಅಗತ್ಯ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.

ಆದರೆ ಬಂಧನ ಕೇಂದ್ರ ಸ್ಥಾಪನೆಗಾಗಿ ಯಾವ ’ಇತರ ಮೂಲಸೌಕರ್ಯಗಳನ್ನು’ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎನ್ನುವುದನ್ನು ರಾಯ್ ತಿಳಿಸಲಿಲ್ಲ. ಬಂಧನ ಕೇಂದ್ರವು ಯಾವಾಗ ಸಿದ್ಧಗೊಳ್ಳಲಿದೆ ಮತ್ತು ಅದು ನಿಖರವಾಗಿ ಎಲ್ಲಿ ಸ್ಥಾಪನೆಯಾಗಲಿದೆ ಎಂಬ ಮೋಹನ್ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ.

ಆದರೆ ಬೆಂಗಳೂರಿನ ನೆಲಮಂಗಲದಲ್ಲಿ ಬಂಧನ ಕೇಂದ್ರ ಸ್ಥಾಪನೆಯಾಗಲಿದೆ ಮತ್ತು 2019ರಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

 ಮೋಹನ್ ಪ್ರಶ್ನೆಯು ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ವಾಸವಿರುವ ಅಕ್ರಮ ವಲಸಿಗರ ಕುರಿತು ಏನಾದರೂ ಮಾಹಿತಿ ಲಭ್ಯವಿದೆಯೇ ಎನ್ನುವುದರ ಕುರಿತಾಗಿದ್ದರೆ, ರಾಯ್ ಅವರು ಕೇವಲ ‘ಅಕ್ರಮ ಬಾಂಗ್ಲಾದೇಶಿ ಪ್ರಜೆಗಳಿಗೆ ’ಸಂಬಂಧಿಸಿದ ಮಾಹಿತಿಯೊಂದಿಗೆ ಉತ್ತರಿಸಿದ್ದರು.

ದೇಶದಲ್ಲಿ ಅಕ್ರವಾಗಿ ನೆಲೆಸಿರುವ ವಲಸಿಗರ ಬಗ್ಗೆ ನಿಖರವಾದ ಮಾಹಿತಿ ಸರಕಾರದ ಬಳಿಯಿಲ್ಲ ಎಂದು ಒಪ್ಪಿಕೊಂಡ ಸಚಿವರು, ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ 143 ಪ್ರಕರಣಗಳು ದಾಖಲಾಗಿವೆ ಮತ್ತು 144 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ರಾಜ್ಯದ ಗೃಹಸಚಿವಾಲಯವು ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News