ಉದ್ಯಾವರ ಬಳಿ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರ್ ಪಲ್ಟಿ
ಉಡುಪಿ, ಜು.3: ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗಿನ ಜಾವ 5:30ರ ಸುಮಾರಿಗೆ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರೊಂದು ಯು ಟರ್ನ್ ತೆಗೆದುಕೊಳ್ಳುವ ವೇಳೆ ರಸ್ತೆಬದಿ ಮಗುಚಿ ಬಿದ್ದಿದ್ದು, ಇದರಿಂದ ಪರಿಸರದಲ್ಲಿ ಕೆಲಕಾಲ ಆತಂಕ ಸೃಷ್ಠಿಯಾಯಿತು.
ಮಂಗಳೂರು ಎಂಆರ್‌ಪಿಎಲ್‌ನಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರನ್ನು ಚಾಲಕ ಡಿಸೇಲ್ ತುಂಬಿಸಲು ಉದ್ಯಾವರ ಪೆಟ್ರೋಲ್ ಬಂಕ್‌ಗೆ ತೆಗೆದುಕೊಂಡು ಹೋಗಿದ್ದನು. ಅಲ್ಲಿ ಡಿಸೇಲ್ ತುಂಬಿಸಿ ಸ್ವಲ್ಪಮುಂದೆ ಹೋಗುವಾಗ ಪೆಟ್ರೋಲ್ ಬಂಕ್‌ನಲ್ಲಿ ಹಣ ನೀಡಲು ಬಳಸಿದ ಸ್ವೀಪ್ ಕಾರ್ಡ್ ಬಿಟ್ಟು ಬಂದಿರುವುದು ಚಾಲಕನ ಅರಿವಿಗೆ ಬಂತ್ತೆನ್ನಲಾಗಿದೆ.
ಮತ್ತೆ ಪೆಟ್ರೋಲ್ ಬಂಕ್‌ಗೆ ತೆರಳಲು ಚಾಲಕ ಮುಂದೆ ಸಾಗಿ ಉದ್ಯಾವರ ಬಲಾಯಿಪಾದೆಯಲ್ಲಿರುವ ಯು ಟರ್ನ್‌ನಲ್ಲಿ ಟ್ಯಾಂಕರನ್ನು ತಿರುಗಿಸಲು ಪ್ರಯತ್ನಿಸಿದ್ದು, ಆಗ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಟ್ಯಾಂಕರ್ ಚಾಲಕ ಉತ್ತರ ಪ್ರದೇಶದ ಮುಹಮ್ಮದ್ ಅಯುಸಿದ್ದೀನ್(50) ಎಂಬವರು ಸಣ್ಣಪುಟ್ಟ ಗಾಯಗೊಂಡರೆಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿ, ಹೆದ್ದಾರಿ ಸಂಚಾರವನ್ನು ಕೆಲ ಹೊತ್ತು ಸ್ಥಗಿತಗೊಳಿಸಿದರು. ಬಳಿಕ ಪರಿಶೀಲಿಸಿದಾಗ ಟ್ಯಾಂಕರ್‌ನಿಂದ ಯಾವುದೇ ರೀತಿಯಲ್ಲಿ ಗ್ಯಾಸ್ ಸೋರಿಕೆಯಾಗದಿರುವುದು ಕಂಡುಬಂತು. ಮುನ್ನಚ್ಚೆರಿಕೆ ಕ್ರಮವಾಗಿ ಕೆಲ ಸಮಯದ ನಂತರ ಒಂದು ಕಡೆಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಇನ್ನೊಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಅದೇ ರೀತಿ ಟ್ಯಾಂಕರ್ ಪಲ್ಟಿಯಾದ ಸಮೀಪದ ಹೊಟೇಲ್, ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಗ್ಯಾಸ್ ಸೋರಿಕೆಯಾಗದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕ್ರೇನ್ ಮೂಲಕ ಪಲ್ಟಿಯಾಗಿದ್ದ ಟ್ಯಾಂಕರನ್ನು ನೇರವಾಗಿ ನಿಲ್ಲಿಸಿ ಚಲಾಯಿಸಿಕೊಂಡು ಹೋಗಲಾಯಿತು. ಇದರಿಂದ ಯಾವುದೇ ಅಪಾಯ ಎದುರಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.