ಮಾನವನ ತಪ್ಪಿನಿಂದ ಎಲ್ಲೆಡೆ ಜಲಕ್ಷಾಮ: ಸಿಇಒ ಸಿಂಧೂ ರೂಪೇಶ್
ಉಡುಪಿ, ಜು.3: ಮಾನವನ ತಪ್ಪಿನಿಂದ ಇಂದು ಜಲಕ್ಷಾಮ ಎದುರಾಗಿದೆ. ಇದರ ಪರಿಣಾಮ ಮನೆಮನೆಗಳಿಗೆ ಟ್ಯಾಂಕರ್ ನೀರು ಪೂರೈಸುವ ಪರಿಸ್ಥಿತಿ ಉಂಟಾಗಿದೆ. ಆದುದರಿಂದ ಪ್ರತಿಯೊಬ್ಬರು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಜಲಾಮೃತ ವರ್ಷ -2019 ಕಾರ್ಯ ಕ್ರಮದಡಿ ಶಾಲಾ ವಠಾರದಲ್ಲಿ ಅಳವಡಿಸಲಾದ ಮಳೆ ನೀರು ಕೊಯ್ಲು ಹಾಗೂ ಮಳೆ ನೀರು ತಡೆಹಿಡಿಯುವ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ವರ್ಷ ಉಡುಪಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಈ ಬಾರಿ ಎಪ್ರಿಲ್, ಮೇನಲ್ಲಿ ನೀರಿನ ಅಭಾವ ಎದುರಾಗಿದೆ. ಕರಾವಳಿಯಲ್ಲಿ ಬಿದ್ದಿರುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳದೇ ಶೇ.90ರಷ್ಟು ನೀರು ಸಮುದ್ರ ಪಾಲಾಗುತ್ತಿದೆ. ನೀರಿನ ಅಭಾವ ಮುಂದುವರಿದರೆ ಟ್ಯಾಂಕರ್‌ನಲ್ಲೂ ನೀರು ಪೂರೈಕೆ ಮಾಡದ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ಟ್ಯಾಂಕರ್ ನೀರಿನ ಮೊರೆ ಹೋಗುವುದು ತಪ್ಪುತ್ತದೆ ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರ ಜೋಸ್ೆ ಜಿ.ಎಂ. ರೆಬೆಲ್ಲೊ ಮಾತನಾಡಿ, ಮಳೆಗಾಲ ಆರಂಭವಾದರೂ ಮಳೆಯ ಅನುಭವವೇ ಆಗುತ್ತಿಲ್ಲ. ಬಿಸಿಲಿನ ತಾಪದಿಂದ 1300 ಅಡಿ ಆಳದಲ್ಲೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಅರಣ್ಯ ನಾಶವೇ ಮುಖ್ಯ ಕಾರಣ. ಎಲ್ಲ ಕಡೆ ಕಾಂಕ್ರೀಟಿಕರಣ ಆಗುತ್ತಿರುವ ಪರಿಣಾಮ ನೀರನ್ನು ಹಿಡಿದಿಟ್ಟು ಕೊಳ್ಳುವ ಕೆಲಸ ಆಗುತ್ತಿಲ್ಲ ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ್ ರಾವ್ ಜಲಜಾಗೃತಿ ಮಾಹಿತಿ ಪತ್ರ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಸಂಚಾಲಕ ವಂ.ಲಾರೆನ್ಸ್ ಡಿಸೋಜ ವಹಿಸಿದ್ದರು. ಶಾಲಾ ಮುಖ್ಯೋ ಪಾಧ್ಯಾಯ ವಂ.ಲ್ಯಾನ್ಸಿ ಫೆರ್ನಾಂಡಿಸ್ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀರಾ ಡಿಸಿಲ್ವ ಉಪಸ್ಥಿತರಿದ್ದರು. ಸಹಶಿಕ್ಷಕ ಪ್ರಶಾಂತ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.