ಬೇಕಾದಷ್ಟು ಪ್ರಮಾಣದಲ್ಲಿ ಯುರೇನಿಯಂ ಸಂವರ್ಧನೆ: ರೂಹಾನಿ
ಟೆಹರಾನ್, ಜು. 3: ಮುಂದಿನ ರವಿವಾರ ಇರಾನ್, 2015ರ ಪರಮಾಣು ಒಪ್ಪಂದದಲ್ಲಿ ವಿಧಿಸಲಾದ ಮಿತಿಯನ್ನು ಮೀರಿ ಯುರೇನಿಯಂ ಸಂವರ್ಧನೆ ನಡೆಸಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.
‘‘ಜುಲೈ 7ರಂದು, ನಮ್ಮ ಯುರೇನಿಯಂ ಸಂವರ್ಧನೆ ಮಟ್ಟವು 3.67 ಶೇಕಡ ಆಗಿರುವುದಿಲ್ಲ. ಈ ಬದ್ಧತೆಯಿಂದ ನಾವು ಹೊರಬರಲಿದ್ದೇವೆ. ಈ ಮಿತಿಯನ್ನು ಮೀರಿ ನಮಗೆ ಬೇಕಾದಷ್ಟು ಹಾಗೂ ನಮಗೆ ಅಗತ್ಯವಿರುವಷ್ಟು ಪ್ರಮಾಣಕ್ಕೆ ಯುರೇನಿಯಂ ಸಂವರ್ಧನೆಯನ್ನು ಹಿಗ್ಗಿಸುತ್ತೇವೆ’’ ಎಂದು ಬುಧವಾರ ಸಚಿವ ಸಂಪುಟ ಸಭೆಯಲ್ಲಿ ನಡೆದ ಸಭೆಯಲ್ಲಿ ರೂಹಾನಿ ಹೇಳಿದರು.
ಇರಾನ್‌ನಿಂದ ಜಗತ್ತಿನ ಬ್ಲ್ಯಾಕ್ ಮೇಲ್: ಇಸ್ರೇಲ್ ಪ್ರಧಾನಿ ಆರೋಪ
ತನ್ನ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವಂತೆ ಅಂತರ್‌ರಾಷ್ಟ್ರೀಯ ಸಮುದಾಯವನ್ನು ಬ್ಲಾಕ್ ಮೇಲ್ ಮಾಡುವುದಕ್ಕಾಗಿ ಇರಾನ್ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಆರೋಪಿಸಿದ್ದಾರೆ.
‘‘ಪರಮಾಣು ಒಪ್ಪಂದದಲ್ಲಿ ನಿಗದಿಪಡಿಸಲಾದ ಮಿತಿಯನ್ನು ಮೀರಿ ಯುರೇನಿಯಂ ಸಂವರ್ಧನೆ ಮಾಡುವ ಮೂಲಕ ಇರಾನ್ ಈ ವಾರ ಪರಮಾಣು ಒಪ್ಪಂದವನ್ನು ಉಲ್ಲಂಘಿಸಿದೆ’’ ಎಂದು ಜೆರುಸಲೇಮ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದರು.