ಲಿಬಿಯ: ವಲಸಿಗ ಬಂಧನ ಕೇಂದ್ರದ ಮೇಲೆ ದಾಳಿ; 40 ಸಾವು

Update: 2019-07-03 17:02 GMT

ಟ್ರಿಪೋಲಿ (ಲಿಬಿಯ), ಜು. 3: ಲಿಬಿಯ ರಾಜಧಾನಿ ಟ್ರಿಪೋಲಿಯ ಉಪನಗರವೊಂದರಲ್ಲಿರುವ ವಲಸಿಗರ ಬಂಧನ ಕೇಂದ್ರವೊಂದರ ಮೇಲೆ ಮಂಗಳವಾರ ರಾತ್ರಿ ನಡೆದ ವಾಯು ದಾಳಿಯಲ್ಲಿ ಸುಮಾರು 40 ವಲಸಿಗರು ಮೃತಪಟ್ಟಿದ್ದಾರೆ.

ರಾಜಧಾನಿಯನ್ನು ವಶಪಡಿಸಿಕೊಳ್ಳಲು ಮೂರು ತಿಂಗಳುಗಳಿಂದ ಪ್ರಯತ್ನಿಸುತ್ತಿರುವ ಬಂಡುಕೋರ ಹಫ್ತಾರ್ ಈ ದಾಳಿಯನ್ನು ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ತಜೌರದಲ್ಲಿರುವ ಬಂಧನ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 70 ಮಂದಿ ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಇದು ಆರಂಭಿಕ ಲೆಕ್ಕಾಚಾರ. ಸಾವಿನ ಸಂಖ್ಯೆ ಹೆಚ್ಚಬಹುದು’’ ಎಂದು ವಕ್ತಾರರು ನುಡಿದರು.

ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆದ ಲಿಬಿಯದ ರಾಷ್ಟ್ರೀಯ ಏಕತಾ ಸರಕಾರವು ಈ ದಾಳಿಯನ್ನು ‘ಹೀನ ಅಪರಾಧ’ ಎಂಬುದಾಗಿ ಬಣ್ಣಿಸಿದೆ ಹಾಗೂ ಅದರ ಹೊಣೆಯನ್ನು ‘ಯುದ್ಧಾಪರಾಧಿ ಖಲೀಫರ್ ಹಫ್ತಾರ್’ ಮೇಲೆ ಹೊರಿಸಿದೆ.

ಪೂರ್ವ ಮತ್ತು ದಕ್ಷಿಣ ಲಿಬಿಯದ ಹೆಚ್ಚಿನ ಭಾಗಗಳ ಮೇಲೆ ನಿಯಂತ್ರಣ ಹೊಂದಿರುವ ಹಫ್ತಾರ್, ರಾಜಧಾನಿಯನ್ನು ವಶಪಡಿಸಿಕೊಳ್ಳಲು ಎಪ್ರಿಲ್ ತಿಂಗಳ ಆದಿ ಭಾಗದಲ್ಲಿ ದಾಳಿಯನ್ನು ಆರಂಭಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News