ರಶ್ಯದ ಸಬ್‌ಮರೀನ್‌ನಲ್ಲಿ ಬೆಂಕಿ: 14 ನಾವಿಕರ ಸಾವು

Update: 2019-07-03 17:07 GMT

ಮಾಸ್ಕೋ, ಜು. 3: ರಶ್ಯದ ಆಳ ಸಮುದ್ರ ಸಂಶೋಧನಾ ಸಬ್‌ಮರೀನೊಂದು ಆರ್ಕ್‌ಟಿಕ್ ಸಮೀಪ ಸಾಗರ ತಳದಲ್ಲಿ ಸಮೀಕ್ಷೆ ನಡೆಸುತ್ತಿದ್ದಾಗ ಉಂಟಾದ ಬೆಂಕಿ ಅಪಘಾತದಲ್ಲಿ 14 ನಾವಿಕರು ಮೃತಪಟ್ಟಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.

ಸಬ್‌ಮರೀನ್ ಪರಮಾಣು ಸಜ್ಜಿತವಾಗಿತ್ತು ಎಂಬುದಾಗಿ ರಶ್ಯದ ಮಾಧ್ಯಮ ಸಂಸ್ಥೆ ಆರ್‌ಬಿಸಿ ಸೇನಾ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದರೆ, ಅದು ಯಾವ ರೀತಿಯ ಸಬ್‌ಮರೀನ್ ಆಗಿತ್ತು ಎಂಬ ಬಗ್ಗೆ ರಶ್ಯದ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.

ಇದು 2000 ಆಗಸ್ಟ್ ಬಳಿಕ ರಶ್ಯದ ಸಬ್‌ಮರೀನ್ ಒಳಗೊಂಡ ಅತ್ಯಂತ ಭೀಕರ ಅಪಘಾತವಾಗಿದೆ. ಅಂದು ಪರಮಾಣು ಸಜ್ಜಿತ ಸಬ್‌ಮರೀನ್ ‘ಕುರ್ಸ್ಕ್’ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ ಬಳಿಕ ಅದು ಬ್ಯಾರೆಂಟ್ಸ್ ಸಮುದ್ರದ ತಳಕ್ಕೆ ಮುಳುಗಿತ್ತು. ಅದರಲ್ಲಿದ್ದ ಎಲ್ಲ 118 ಮಂದಿ ಮೃತಪಟ್ಟಿದ್ದರು.

ಈ ಅಪಘಾತವೂ ಬ್ಯಾರೆಂಟ್ಸ್ ಸಮುದ್ರದ ಸಮೀಪದಲ್ಲೇ ನಡೆದಿದೆ.

ಪರಿಸ್ಥಿತಿಯ ಮೇಲೆ ತಾವು ನಿಗಾ ಇಟ್ಟಿರುವುದಾಗಿ ಸಮೀಪದ ನಾರ್ವೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಅಸಹಜ ಅಧಿಕ ಮಟ್ಟ ವಿಕಿರಣ ಗೋಚರಿಸಿಲ್ಲ ಎಂದು ಅವರು ಹೇಳಿದ್ದಾರೆ.

‘‘ಇದು ರಶ್ಯ ನೌಕಾಪಡೆಗೆ ಸಂಭವಿಸಿದ ದೊಡ್ಡ ನಷ್ಟವಾಗಿದೆ’’ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಕ್ಷಣಾ ಸಚಿವರೊಂದಿಗೆ ನಡೆಸಿದ ಸಭೆಯ ವೇಳೆ ಹೇಳಿದರು.

ಘಟನೆಯು ಸೋಮವಾರ ರಶ್ಯದ ಜಲಪ್ರದೇಶದಲ್ಲಿ ಸಂಭವಿಸಿದೆ ಹಾಗೂ ಬೆಂಕಿಯನ್ನು ನಂದಿಸಲಾಗಿದೆ ಎಂದು ರಶ್ಯ ರಕ್ಷಣಾ ಸಚಿವರು ಹೇಳಿದರು.

‘‘ರಶ್ಯದ ನೌಕಾಪಡೆಯ ಪರವಾಗಿ ಜಾಗತಿಕ ಸಾಗರದ ಪರಿಸರವನ್ನು ಅಧ್ಯಯನ ಮಾಡುತ್ತಿದ್ದ ವೈಜ್ಞಾನಿಕ ಅಧ್ಯಯನ ನೌಕೆಯಲ್ಲಿ ಬೆಂಕಿ ಹತ್ತಿಕೊಂಡಿತು’’ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News