ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ಗಮನ ಸೆಳೆದ ಹಲಸು ಮೇಳ
ಮಂಜೇಶ್ವರ: ಆಧುನಿಕ ಜೀವನ ಶೈಲಿಗೆ ಒಗಿಕೊಂಡ ಜನರು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮರೆತು ಫಾಸ್ಟ್ ಫುಡ್ ಸಂಸ್ಕೃತಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವುದು ವಿಶಾದನೀಯ. ಸಾಕಷ್ಟು ಸಾಂಪ್ರದಾಯಿಕ ಆಹಾರ ಪದಾರ್ಥಗಳು ನಮ್ಮಲ್ಲಿವೆ. ಅವುಗಳಲ್ಲಿ ಹಲಸು ಕೂಡಾ ಒಂದಾಗಿದ್ದು, ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರ ಹಸಿವನ್ನು ನೀಗಿಸಬಲ್ಲುದು. ಹಲಸು ಹೊಲಸು ಎಂಬ ಭಾವನೆಯನ್ನು ಬದಿಗಿಟ್ಟು ದಿನನಿತ್ಯದ ಆಹಾರದ ಭಾಗವಾಗಿ ಹಲಸು ಮತ್ತೆ ಬಳಕೆಗೆ ಬರಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಡಾ. ಬೇ.ಸಿ.ಗೋಪಾಲಕೃಷ್ಣ ಭಟ್ ಅವರು ತಿಳಿಸಿದರು.
ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಲಸು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಬಂಧಕಿ ಪ್ರೇಮಾ ಕೆ.ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲಸು ಎಲ್ಲರ ಹಸಿವನ್ನು ನೀಗಿಸುವ ಆಹಾರ ಪದಾರ್ಥವಾಗಿದ್ದು ಎಲ್ಲರೂ ಉಪಯೋಗಿಸಲು ಆಸಕ್ತರಾಗಬೇಕು ಎಂದು ತಿಳಿಸಿದರು.
ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ಕಾವಲು ಸಮಿತಿ ಸಂಚಾಲಕ ಇಬ್ರಾಹಿಂ ಹೊನ್ನೆಕಟ್ಟೆ, ಶಿಕ್ಷಕರಾದ ರಾಜಾರಾಮ ರಾವ್, ನಿವೃತ್ತ ಅಧ್ಯಾಪಕ ಬೆಣ್ಣೆಮನೆ ಗೋಪಾಲಕೃಷ್ಣ ಭಟ್, ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಮೇಶ ಕೆ.ಎನ್.ಉಪಸ್ಥಿತರಿದ್ದರು.
ಪರಿಸರದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ಐವತ್ತಕ್ಕೂ ಮಿಕ್ಕಿದ ಹಲಸನ್ನು ಸಂಸ್ಕರಿಸಿ, ಉಪ್ಪಿನಲ್ಲಿ ಹಾಕಿ ಸಂರಕ್ಷಿಸಿ ಇರಿಸಲಾಯಿತು. ಮೂವತ್ತಕ್ಕಿಂತಲೂ ಹೆಚ್ಚು ಹಲಸಿನ ವಿವಿಧ ಖಾದ್ಯ ಪದಾರ್ಥಗಳನ್ನು ಈ ಸಂದರ್ಭ ಪ್ರದರ್ಶಿಸಲಾಯಿತು.
ವಿದ್ಯಾರ್ಥಿಗಳಿಗೆ ಹಲಸಿನ ಹಣ್ಣಿನ ಪಾಯಸ ವಿತರಿಸಲಾಯಿತು. ಹಲಸು ಸಂಸ್ಕರಣಾ ಚಟುವಟಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಹೈಯರ್ ಸೆಕೆಂಡರಿ ಸಮತ್ವ ವಿಭಾಗದ ಉತ್ಪನ್ನಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ನಿವೃತ್ತ ಶಿಕ್ಷಕ ಬೆಣ್ಣೆಮನೆ ಗೋಪಾಲಕೃಷ್ಣ ಭಟ್, ಲೋಕೇಶ್ ಕೆ., ರವಿ ಲೋಚನ, ಸಿ.ಚ್.ಲಕ್ಷ್ಮೀಶ, ಹರೀಶ, ಗೀತಾ ನೇತೃತ್ವ ನೀಡಿದರು.
ರವಿಲೋಚನ ಸಿ.ಎಚ್. ಸ್ವಾಗತಿಸಿ, ಹಿರಿಯ ಶಿಕ್ಷಕಿ ಲಲಿತ ಬಿ.ವಂದಿಸಿದರು.