ಕುವೈತ್ ಸಂತ್ರಸ್ತರ ಪ್ರಥಮ ತಂಡ ಜು.13ಕ್ಕೆ ಆಗಮನ

Update: 2019-07-03 17:48 GMT

ಮಂಗಳೂರು, ಜು.3: ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿ ವಂಚನೆಗೆ ಒಳಗಾಗಿದ್ದ ಭಾರತೀಯ ಸಂತ್ರಸ್ತರಲ್ಲಿ ಬಹುತೇಕ ಮಂದಿ ತಾಯ್ನೋಡಿಗೆ ವಾಪಸಾಗಲಿದ್ದಾರೆ. 73 ಮಂದಿ ಪೈಕಿ 44 ಮಂದಿಗೆ ಟಿಕೆಟ್ ವ್ಯವಸ್ಥೆಯಾಗಿದೆ. ಮೊದಲ ತಂಡವು ಜು.13ರಂದು ಭಾರತಕ್ಕೆ ವಾಪಸಾಗಲಿದೆ.

44 ಸಂತ್ರಸ್ತರು ವಿಮಾನ ಮೂಲಕ ಮುಂಬೈಗೆ ಆಗಮಿಸಲಿದ್ದು, ಈ ಪೈಕಿ ನಾಲ್ವರು ಮಂಗಳೂರು ಕರಾವಳಿಯವರು ಹಾಗೂ ಇಬ್ಬರು ತಮಿಳುನಾಡಿನವರಿದ್ದಾರೆ.

ಸಂತ್ರಸ್ತರಾಗಿದ್ದ 73 ಮಂದಿ ಪೈಕಿ 10 ಮಂದಿ ಎಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಉಳಿದ 63 ಮಂದಿಯಲ್ಲಿ 44 ಮಂದಿಗಷ್ಟೆ ಟಿಕೆಟ್ ಹಾಗೂ ಜಿಪಿ (ಗವರ್ನಮೆಂಟ್ ಪ್ರಾಜೆಕ್ಟ್) ಪತ್ರವನ್ನು ಅಲ್ಲಿನ ಟ್ರಾವಲರ್ ಏಜೆನ್ಸಿಯಿಂದ ತೆಗೆಸಿಕೊಡಲು ಸಾಧ್ಯವಾಗಿದೆ. ಇನ್ನುಳಿದ 38 ಮಂದಿಯ ಎರಡನೇ ತಂಡ ಜು.17ರಂದು ಮುಂಬೈಗೆ ಬಂದಿಳಿಯಲಿದೆ ಎಂದು ಕುವೈತ್‌ನ ಅನಿವಾಸಿ ಭಾರತೀಯ ಮೂಲಗಳು ತಿಳಿಸಿವೆ.

44 ಸಂತ್ರಸ್ತರ ವೀಸಾ ರದ್ದುಗೊಳಿಸುವ ಪ್ರಕ್ರಿಯೆ ಇಷ್ಟರಲ್ಲೇ ನಡೆಯಲಿದೆ. ಈ ಮಂದಿಯ ವಿಮಾನ ಟಿಕೆಟ್ ಹಾಗೂ ಜಿಪಿ ಪತ್ರವನ್ನು ಭಾರತೀಯ ರಾಯಭಾರಿ ಕಚೇರಿಗೆ ನೀಡಲಾಗಿದ್ದು, ಅಲ್ಲಿಂದ ಉದ್ಯೋಗ ನೀಡಿದ ಕಂಪೆನಿಗೆ ಹಸ್ತಾಂತರಿಸಲಾಗಿದೆ. ಕಂಪೆನಿಯು ವೀಸಾ ರದ್ದುಗೊಳಿಸಿದ ಬಳಿಕ ಟಿಕೆಟ್ ಹಾಗೂ ಜಿಪಿ ಪತ್ರವನ್ನು ಸಂತ್ರಸ್ತರಿಗೆ ನೀಡಲಿದೆ. ಅಲ್ಲಿಗೆ ಸಂತ್ರಸ್ತರನ್ನು ಕುವೈತ್‌ನಿಂದ ತಾಯ್ನಾಡಿಗೆ ವಾಪಸ್ ಕಳುಹಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗ ವಂಚನೆಗೆ ಒಳಗಾಗಿ ಕುವೈತ್‌ನಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಸಂತ್ರಸ್ತ ನೌಕರರ ಬಿಡುಗಡೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಕುವೈತ್‌ನಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳು ಸಾಕಷ್ಟು ಶ್ರಮಿಸಿದ್ದಾರೆ.

44 ಮಂದಿ ಪೈಕಿ 19 ಮಂದಿಗೆ ಟಿಕೆಟ್ ವ್ಯವಸ್ಥೆಯನ್ನು ಶಾಸಕ ವೇದವ್ಯಾಸ ಕಾಮತ್ ಮಾಡಿದ್ದರೆ, ಬಾಕಿ 15 ಮಂದಿಗೆ ಉದ್ಯಮಿ ಆಕಾಶ್ ಪನ್ವರ್, ಇಬ್ಬರಿಗೆ ಉದ್ಯಮಿಗಳಾದ ಮೋಹನದಾಸ್ ಕಾಮತ್ ಮತ್ತು ಬಿನು ಫಿಲಿಪ್, ಇನ್ನಿಬ್ಬರಿಗೆ ಕುವೈತ್ ಬಂಟರ ಸಂಘ ಟಿಕೆಟ್ ವ್ಯವಸ್ಥೆ ಕಲ್ಪಿಸಿದೆ. ಉಳಿದ ಆರು ಮಂದಿ ತಮಿಳುನಾಡು ಮೂಲದವರಿಗೆ ಅವರ ಸಂಬಂಧಿಕರು ಟಿಕೆಟ್ ವ್ಯವಸ್ಥೆ ಮಾಡಿದ್ದರು.

ಪ್ರಸಕ್ತ ಕುವೈತ್‌ನಲ್ಲಿ 53 ಡಿಗ್ರಿವರೆಗೆ ಉಷ್ಣಾಂಶವಿದ್ದು, ಹೊರಗಡೆ ಅಡ್ಡಾಡುವುದೇ ಕಷ್ಟವಾಗಿದೆ ಎಂದು ಮೂಲಗಳು ಹೇಳುತ್ತಿವೆ.
63 ಮಂದಿಯಲ್ಲಿ 44 ಮಂದಿ ತಾಯ್ನಡಿಗೆ ಮರಳುವುದು ಖಚಿತವಾದರೂ ಉಳಿದ 19 ಮಂದಿ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಸೃಷ್ಟಿಯಾಗಿದೆ. ಈ 19 ಮಂದಿಗೆ ಉದ್ಯೋಗ ನೀಡಿದ ಕಂಪೆನಿ ಕ್ಲಿಯರೆನ್ಸ್ ನೀಡಿಲ್ಲ ಎನ್ನಲಾಗಿದೆ. 44 ಮಂದಿ ಸಂತ್ರಸ್ತರು ತಾಯ್ನಾಡಿಗೆ ಮರಳಿದ ಬಳಿಕ ಬಾಕಿ ಸಂತ್ರಸ್ತರ ಬಿಡುಗಡೆ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News