×
Ad

ಮಹುಆ ವಿರುದ್ಧ ಸುಳ್ಳಾರೋಪ ಮಾಡಿ ಮಂಗಳಾರತಿ ಮಾಡಿಸಿಕೊಂಡ ಝೀ ನ್ಯೂಸ್‌ನ ಸುಧೀರ್ ಚೌಧರಿ

Update: 2019-07-04 09:45 IST

ಹೊಸದಿಲ್ಲಿ, ಜು.4: ತೃಣಮೂಲ ಕಾಂಗ್ರೆಸ್‌ನ ಮೊದಲ ಬಾರಿಯ ಸಂಸದೆ ಮಹುಆ ಮೊಯಿತ್ರಾ ಜೂನ್ 25ರಂದು ಮಾಡಿದ ತನ್ನ ಚೊಚ್ಚಲ ಸಂಸತ್ತಿನ ಭಾಷಣ ದೇಶಾದ್ಯಂತ ಭಾರೀ ಚರ್ಚೆಯಲ್ಲಿ ಇನ್ನೂ ಮುಂದುವರಿದಿದೆ. ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಚಾಚಿ ಏಟು ಎಂದೇ ವಿಪಕ್ಷ, ಪ್ರಗತಿಪರ ವಲಯಗಳಲ್ಲಿ ಈ ಭಾಷಣ ವ್ಯಾಪಕ ಜನಪ್ರಿಯತೆ ಪಡೆಯಿತು. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಈಗ ಫ್ಯಾಶಿಸಂನ ಆರಂಭಿಕ ಏಳು ಲಕ್ಷಣಗಳು ಸ್ವಷ್ಟವಾಗಿ ಕಾಣುತ್ತಿದೆ ಎಂದು ಮಹುಆ ವಿವರಿಸಿ ಹೇಳಿದ್ದು. ಆ ಭಾಷಣದ ಕುರಿತೇ ಹಲವು ರಾಷ್ಟ್ರೀಯ ಮಾಧ್ಯಮಗಳು ಮಹುಆ ಅವರ ವಿಶೇಷ ಸಂದರ್ಶನ ಹಾಗೂ ಚರ್ಚೆಗಳನ್ನು ನಡೆಸಿದ್ದವು.

ಈಗ ಮಹುಆ ಅವರ ಭಾಷಣ ಮತ್ತೆ ಚರ್ಚೆಗೆ ಬಂದಿದೆ. ಈ ಬಾರಿ ಬೇರೆಯೇ ಕಾರಣಕ್ಕೆ ಮಹುಆ ತನ್ನ ಭಾಷಣದಲ್ಲಿ ಕೃತಿ ಚೌರ್ಯ ಮಾಡಿ ಸಂಸತ್ತಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಿ ಝೀ ನ್ಯೂಸ್ ಹಾಗೂ ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಮಂಗಳಾರತಿ ಮಾಡಿಸಿಕೊಳ್ಳುವ ಮೂಲಕ ಮತ್ತೆ ಮಹುಆ ಭಾಷಣಕ್ಕೆ ಪ್ರಚಾರ ನೀಡಿದ್ದಾರೆ.

ಆಗಿದ್ದಿಷ್ಟು....
ಮಹುಆ ಭಾಷಣದಲ್ಲಿ ಹೇಳಿದ ವಿಷಯಗಳನ್ನು 2017ರಲ್ಲಿ ವಾಷಿಂಗ್ಟನ್ ಮಾಸಿಕದಲ್ಲಿ ಪ್ರಕಟವಾದ ಲೇಖನವೊಂದರಿಂದ ಕದ್ದಿದ್ದಾರೆ ಎಂಬರ್ಥದಲ್ಲಿ ಕೆಲವು ಬಲಪಂಥೀಯ ಚಿಂತಕರು ಮೊದಲು ಟ್ವೀಟ್ ಮಾಡಿದರು. ಮಕರಂದ್ ಪರಾಂಜಪೆ, ಕಾಂಚನ್ ಗುಪ್ತಾ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರಲ್ಲಿ ಪ್ರಮುಖರು.

ಇದರ ಬೆನ್ನಿಗೇ ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ತನ್ನ ಪ್ರಮುಖ ಕಾರ್ಯಕ್ರಮ ಡೈಲಿ ನ್ಯೂಸ್ ಆ್ಯಂಡ್ ಅನಾಲಿಸಿಸ್(ಡಿಎನ್‌ಎ)ನಲ್ಲಿ ಸುದೀರ್ಘ ವಿವರಣೆ ನೀಡಿ ಮಹುಆ ಭಾಷಣದಲ್ಲಿ ಉಲ್ಲೇಖಿಸಿದ್ದ 12 ಅಂಶಗಳಲ್ಲಿ 7 ಅಂಶಗಳನ್ನು 2017ರ ‘ವಾಷಿಂಗ್ಟನ್ ಮಂತ್ಲಿ’ಯ ಲೇಖನವೊಂದರಿಂದ ಕದ್ದಿದ್ದಾರೆ. ಇದು ದ್ವೇಷ ಭಾಷಣ ಬೇರೆ. ಇದು ನಮ್ಮ ಸಂಸತ್ತಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದರು. ಆದರೆ ಸತ್ಯ ಬೇರೆಯೇ ಇತ್ತು. ಅದನ್ನು ಸ್ವತಃ 2017ರಲ್ಲಿ ಲೇಖನ ಬದರೆ ಮಾರ್ಟಿನ್ ಲಾಂಗ್‌ಮ್ಯಾನ್ ಅವರೇ ಟ್ವೀಟ್ ಮಾಡುವ ಮೂಲಕ ಝೀ ನ್ಯೂಸ್ ಹಾಗೂ ಸುಧೀರ್ ಚೌಧರಿ ಸಹಿತ ಮಹುಆ ವಿರುದ್ಧ ಸುಳ್ಳಾರೋಪ ಮಾಡಿದ ಎಲ್ಲರ ವಿರುದ್ಧವೂ ಅತ್ಯಂತ ಕಟುವಾಗಿ ಟೀಕಾ ಪ್ರಹಾರ ಮಾಡಿದ್ದಾರೆ.

ಮಹುಆ ತನ್ನ ಭಾಷಣದಲ್ಲೇ ತಾನು ಈ ಅಂಶಗಳನ್ನು ಅಮೆರಿಕದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂನಲ್ಲಿ ಹಾಕಿರುವ ಪೋಸ್ಟರ್‌ನಿಂದ ನೋಡಿ ತಿಳಿದುಕೊಂಡಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಮಾರ್ಟಿನ್ ಕೂಡಾ ಇದೇ ಪೋಸ್ಟರ್‌ನಿಂದ ಪ್ರೇರಣೆ ಪಡೆದು ತನ್ನ ಲೇಖನ ಬರೆದಿದ್ದರು. ಹಾಗಾಗಿ ಮಹುಆ ಕೃತಿ ಚೌರ್ಯ ಮಾಡುವ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ.

‘‘ನಾನು ಭಾರತದ ಇಂಟರ್‌ನೆಟ್‌ನಲ್ಲಿ ಬಹಳ ಖ್ಯಾತಿ ಪಡೆಯುತ್ತಿದ್ದೇನೆ, ಏಕೆಂದರೆ ಅಲ್ಲಿನ ರಾಜಕಾರಣಿಯೊಬ್ಬರ ವಿರುದ್ಧ ತನ್ನ ಲೇಖನದ ಕೃತಿಚೌರ್ಯ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಲಾಗಿದೆ. ಇದು ಬಹಳ ತಮಾಷೆಯಾಗಿದೆ. ಆದರೆ ಬಲಪಂಥೀಯ ಕತ್ತೆಗಳು ಎಲ್ಲ ದೇಶಗಳಲ್ಲೂ ಒಂದೇ ರೀತಿ ಇರುತ್ತದೆ’’ ಎಂದು ಮಾರ್ಟಿನ್ ಕಟು ಟೀಕೆ ಮಾಡಿದ್ದಾರೆ. ‘‘ಇದು ಹಾಸ್ಯಾಸ್ಪದ. ಆಕೆ ಏನನ್ನೂ ಕದ್ದಿಲ್ಲ ಅಥವಾ ಕೃತಿಚೌರ್ಯ ಮಾಡಿಲ್ಲ’’ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರಕಟನೆ ನೀಡಿರುವ ಮಹುಆ ಕೂಡಾ ನಾನು ಆ ಪೋಸ್ಟರ್ ಬಗ್ಗೆ ಭಾಷಣದಲ್ಲೇ ಹೇಳಿದ್ದೆ. ಅದರಲ್ಲಿದ್ದ 14 ಅಂಶಗಳಲ್ಲಿ ಭಾರತಕ್ಕೆ ಸೂಕ್ತ ಕಂಡ 7 ಅಂಶಗಳನ್ನು ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಮಹುಆ ಕೃತಿಚೌರ್ಯ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಿದ ಸುಧೀರ್ ಚೌಧರಿ ಸ್ವತಃ ಸುಳ್ಳು ಸುದ್ದಿ ಹರಡುವ ಮೂಲಕ ಕುಖ್ಯಾತಿ ಗಳಿಸಿರುವವರು. ಅವರ ಕುರಿತ www.newslaundry.com ನವರ ವೀಡಿಯೊವೊಂದು ಇಲ್ಲಿದೆ ನೋಡಿ:

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News