ಸಶಸ್ತ್ರ ಪಡೆ ಸೇರಲು ಮಹಿಳೆಯರ ಅಮಿತೋತ್ಸಾಹ...!

Update: 2019-07-04 04:56 GMT

ಹೊಸದಿಲ್ಲಿ, ಜು.4: ಅವಕಾಶ ಸಿಕ್ಕಿದರೆ ದೊಡ್ಡ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರಿ ದೇಶಕ್ಕಾಗಿ ಹೋರಾಡಲು ಸಿದ್ಧ ಎನ್ನುವುದನ್ನು ದೇಶದ ವೀರವನಿತೆಯರು ಸಾಬೀತುಪಡಿಸಿದ್ದಾರೆ. ಯುದ್ಧ ವಿಮಾನ ಚಾಲನೆ ಮಾಡಲು ಆರು ಮಹಿಳಾ ಪೈಲಟ್‌ಗಳು ಇದೀಗ ತರಬೇತಿ ಪಡೆಯುತ್ತಿದ್ದು, ಇದೀಗ 15 ಲಕ್ಷ ಬಲದ ಪ್ರಬಲ ಸಶಸ್ತ್ರ ಪಡೆ ಹೊಸ ದಾಖಲೆ ಬರೆದಿದೆ. ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ (ಸಿಎಂಪಿ) ಪಡೆಯ 100 ಖಾಲಿ ಹುದ್ದೆಗಳಿಗೆ 2 ಲಕ್ಷ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ!

ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಪ್ರಾಂತೀಯ ಸೇನೆಯಲ್ಲಿ ಮಹಿಳಾ ಪ್ರೊವೊಸ್ಟ್ ಯುನಿಟ್ ಆರಂಭಿಸಲು ಮುಂದಾಗಿದೆ. ಇಬ್ಬರು ಅಧಿಕಾರಿಗಳು ಮೂವರು ಕಿರಿಯ ನಿಯುಕ್ತ ಅಧಿಕಾರಿಗಳು ಹಾಗೂ 40 ಸೈನಿಕರು ಈ ಘಟಕದಲ್ಲಿರುತ್ತಾರೆ. ಇದಕ್ಕೆ ಅಂತಿಮ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಶಸ್ತ್ರ ಪಡೆಗಳಲ್ಲಿ ಪ್ರಸ್ತುತ ಮಹಿಳಾ ಅಧಿಕಾರಿಗಳನ್ನಷ್ಟೇ ನಿಯೋಜಿಸಿಕೊಳ್ಳಲಾಗುತ್ತಿದೆ. ಆದರೆ ಇವರಿಗೆ ಯುದ್ಧನೌಕೆಗಳಲ್ಲಿ ಮತ್ತು ಸಬ್‌ಮೆರಿನ್‌ಗಳಲ್ಲಿ, ಇನ್‌ಫ್ಯಾಂಟ್ರಿ ಮೊದಲಾದ ಸಮರ ತಂಡಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿಲ್ಲ.

"ಮಹಿಳಾ ಯೋಧರ (ಸಾಮಾನ್ಯ ಕರ್ತವ್ಯ) ನೇಮಕ ನಿರ್ಧಾರ ಅತ್ಯಂತ ಮಹತ್ವದ್ದು. ಎಪ್ರಿಲ್ 25ರಿಂದೀಚೆಗೆ ಎರಡು ಲಕ್ಷ ಮಹಿಳೆಯರು ಇದುವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ನೇಮಕಾತಿ ರ್ಯಾಲಿ ಈ ತಿಂಗಳ ಅಂತ್ಯಕ್ಕೆ ಬೆಳಗಾವಿಯಲ್ಲಿ ನಡೆಯಲಿದೆ" ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಿಂತ ಕೆಳಗಿನ ಹುದ್ದೆಯಾದ ಪಿಬಿಒಆರ್ ಹುದ್ದೆಗಳಿಗೆ ಮುಂದಿನ 17 ವರ್ಷಗಳಲ್ಲಿ ಹಂತಹಂತವಾಗಿ 1,700 ಮಹಿಳೆಯರನ್ನು ನೇಮಿಸಿಕೊಳ್ಳಲು ಸೇನೆ ಉದ್ದೇಶಿಸಿದೆ.

"100 ಮಹಿಳೆಯರನ್ನು ಪ್ರತಿ ವರ್ಷ ನೇಮಿಸಿಕೊಳ್ಳಲು ಉದ್ದೇಶಿಸಿದ್ದು, ಕ್ರಮೇಣ ಸಿಎಂಪಿಯಲ್ಲಿ ಮಹಿಳೆಯರ ಪ್ರಮಾಣ 20 ಶೇಕಡಕ್ಕೆ ಹೆಚ್ಚಲಿದೆ. ಪ್ರಾಂತೀಯ ಸೇನೆಯಲ್ಲಿ ಮೊಟ್ಟಮೊದಲ ಮಹಿಳಾ ಪ್ರೊವೊಸ್ಟ್ ಘಟಕದ ಕಾರ್ಯಕ್ಷಮತೆಯನ್ನು ನೋಡಿಕೊಂಡು, ಇಂಥ ಘಟಕಗಳನ್ನು ಹೆಚ್ಚಿಸಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News