ಗುಜರಾತ್: ಕಾಂಗ್ರೆಸ್ ಶಾಸಕರು ಸುರಕ್ಷಿತ ತಾಣಕ್ಕೆ ಸ್ಥಳಾಂತರ !

Update: 2019-07-04 12:56 GMT

ಗಾಂಧೀನಗರ, ಜು.4: ಶುಕ್ರವಾರ ಗುಜರಾತ್‌ನ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.

ಸಾರ್ವತ್ರಿಕ ಚುನಾವಣೆ ಸಂದರ್ಭ ರಾಜ್ಯದ ಕನಿಷ್ಟ 6 ಕಾಂಗ್ರೆಸ್ ಶಾಸಕರು ಆಡಳಿತಾರೂಢ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಕಾರಣದಿಂದ ಮುಂಜಾಗರೂಕತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು ಶಾಸಕರನ್ನು ರಾಜಸ್ತಾನದ ಮೌಂಟ್ ಅಬುಗೆ ಸ್ಥಳಾಂತರಿಸಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಗುಜರಾತ್‌ನ ಎರಡು ರಾಜ್ಯಸಭೆ ಸ್ಥಾನಗಳಿಗೆ ಬಿಜೆಪಿಯಿಂದ ಎಸ್ ಜೈಶಂಕರ್ (ವಿದೇಶ ವ್ಯವಹಾರ ಸಚಿವ) ಹಾಗೂ ಜುಗಲ್‌ಜಿ ಠಾಕೂರ್‌ರನ್ನು ಕಣಕ್ಕಿಳಿಸಲಾಗಿದ್ದರೆ ವಿಪಕ್ಷದಿಂದ ಮಾಜಿ ಸಚಿವೆ ಚಂದ್ರಿಕಾ ಚುಡಾಸಾಮ ಮತ್ತು ಸ್ಥಳೀಯ ಮುಖಂಡ ಗೌರವ್ ಪಾಂಡ್ಯ ಸ್ಪರ್ಧೆಯಲ್ಲಿದ್ದಾರೆ.

ಆದರೆ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿರುವ ಕಾಂಗ್ರೆಸ್ ಮುಖಂಡ ಅಲ್ಪೇಶ್ ಠಾಕೂರ್ ಹಾಗೂ ಅವರ ಬೆಂಬಲಿಗರು ಅಡ್ಡಮತದಾನ ನಡೆಸಬಹುದು ಎಂಬ ಸಂಶಯ ಕಾಂಗ್ರೆಸ್ ಮುಖಂಡರಲ್ಲಿದೆ.

ಅಲ್ಪೇಶ್ ಠಾಕೂರ್ ಹಾಗೂ ಧವಳಸಿಂಹ ಝಾಲ ರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಅವರು ಈಗಲೂ ಕಾಂಗ್ರೆಸ್ ಶಾಸಕರಾಗಿದ್ದಾರೆ. ಬಿಜೆಪಿ ಹಣಬಲ ಮತ್ತು ತೋಳ್ಬಲವನ್ನು ಬಳಸಿ ಕಾಂಗ್ರೆಸ್ ಶಾಸಕರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ, ಅಲ್ಲದೆ ಕುದುರೆ ವ್ಯಾಪಾರಕ್ಕೆ ತಡೆಯೊಡ್ಡಲು ನಮ್ಮ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ವ್ಹಿಪ್ ಅಶ್ವಿನ್ ಕೋತ್ವಾಲ್ ಹೇಳಿದ್ದಾರೆ.

ಯಾರನ್ನೂ ಬಲವಂತಗೊಳಿಸಿಲ್ಲ. ಸೋಮವಾರದವರೆಗೆ ವಿಧಾನಸಭೆಯ ಕಲಾಪಕ್ಕೆ ಬಿಡುವು ಇರುವ ಕಾರಣ ಶಾಸಕರು ಮಿನಿ ಪ್ರವಾಸಕ್ಕೆ ಹೊರಟಿದ್ದು ಮೌಂಟ್ ಅಬುವಿನಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಅಲ್ಪೇಶ್ ಠಾಕೂರ್ ಸಹಿತ ತನ್ನ ಎಲ್ಲಾ ಸದಸ್ಯರಿಗೂ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವ್ಹಿಪ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News