×
Ad

ಪೊಲೀಸರಿಗೆ ಮಾಹಿತಿ ತಂತ್ರಜ್ಞಾನದ ಪರಿಣತಿ ಅತ್ಯಗತ್ಯ: ಸಂದೀಪ್ ಪಾಟೀಲ್

Update: 2019-07-04 18:34 IST

ಮಂಗಳೂರು, ಜು.4: ಪೊಲೀಸರಿಗೆ ಸೈಬರ್ ಅಪರಾಧಗಳು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಅವುಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕುವ ಸಲುವಾಗಿ ಎಲ್ಲಾ ಪೊಲೀಸರು ತಾಂತ್ರಿಕ ಮಾಹಿತಿಯನ್ನು ಕರಗತ ಮಾಡಿಕೊಂಡು ಅದರಲ್ಲಿ ಪರಿಣತಿಯನ್ನು ಪಡೆಯಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಪದೋನ್ನತಿ ಪಡೆದ 143 ಮಂದಿ ಪೊಲೀಸರನ್ನು ಅಭಿನಂದಿಸಲು ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಕ್ಸಲಿಸಂ ಮತ್ತು ಟೆರರಿಸಂ ಹೊರತಾಗಿ ಇದೀಗ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಇತರ ಅಪರಾಧಗಳಿಗಿಂತ ಸೈಬರ್ ಅಪರಾಧಗಳೇ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಈ ಸವಾಲನ್ನು ಎದುರಿಸಲು ಎಲ್ಲ ಪೊಲೀಸರು ಕಂಪ್ಯೂಟರ್, ಇಂಟರ್‌ನೆಟ್ ಮತ್ತಿತರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಮಾಹಿತಿಯನ್ನು ಪಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಕೇಂದ್ರ ಕಚೇರಿ ವತಿಯಿಂದ ನೀಡಲಾಗುವ ತರಬೇತಿಯ ಪ್ರಯೋಜನವನ್ನು ಪಡೆಯಬೇಕು ಎಂದು ಸಂದೀಪ್ ಪಾಟೀಲ್ ಕರೆ ನೀಡಿದರು.

ವೃತ್ತಿ ಜೀವನದಲ್ಲಿ ಪದೋನ್ನತಿ ಪಡೆಯುವುದು ಸಂತಸದ ವಿಚಾರ. ಆದರೆ ಪದೋನ್ನತಿಯೊಂದಿಗೆ ಜವಾಬ್ದಾರಿಯೂ ಹೆಚ್ಚುತ್ತದೆ ಎಂಬ ಪ್ರಜ್ಞೆ ಬೇಕು. ಹೊಸ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲು ಕಾಲಕ್ಕೆ ತಕ್ಕಂತೆ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂದೀಪ್ ಪಾಟೀಲ್ ನುಡಿದರು.

ಡಿಸಿಪಿಗಳಾದ ಹನುಮಂತರಾಯ ಸ್ವಾಗತಿಸಿದರು. ಲಕ್ಷ್ಮಿ ಗಣೇಶ್ ವಂದಿಸಿದರು.

ವೇದಿಕೆಯಲ್ಲಿ ಎಸಿಪಿಗಳಾದ ಮಂಜುನಾಥ ಶೆಟ್ಟಿ, ರಾಮರಾವ್, ಭಾಸ್ಕರ ಒಕ್ಕಲಿಗ, ಎಂ.ಎ. ಉಪಾಸೆ ಉಪಸ್ಥಿತರಿದ್ದರು. ಎಎಸ್ಸೈ ಹರಿಶ್ಚಂದ್ರ ಆರ್. ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.

ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ವರ್ಷ ಎ.ಆರ್.ಎಸ್.ಐ. ಹುದ್ದೆಯಿಂದ ಆರ್.ಎಸ್.ಐ. ಹುದ್ದೆಗೆ ಮೂವರು, ಎಚ್.ಸಿ. ಹುದ್ದೆಯಿಂದ ಎಎಸ್ಸೈ ಹುದ್ದೆಗೆ 29 ಮಂದಿ, ಎ.ಎಚ್.ಸಿ. ಹುದ್ದೆಯಿಂದ ಎ.ಆರ್.ಎಸ್.ಐ. ಹುದ್ದೆಗೆ 40 ಮಂದಿ, ಸಿ.ಪಿ.ಸಿ. (ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್) ಹುದ್ದೆಯಿಂದ ಸಿ.ಎಚ್.ಸಿ. ಹುದ್ದೆಗೆ 68 ಮಂದಿ ಹಾಗೂ ಪಿ.ಸಿ.ಯಿಂದ ಎಚ್.ಸಿ. ಹುದ್ದೆಗೆ 3 ಮಂದಿ ಬಡ್ತಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News