ಕೇಂದ್ರದ ಭೂ ಸ್ವಾಧೀನ ಕಾಯ್ದೆಗೆ ತ.ನಾ.ಸರಕಾರದ ತಿದ್ದುಪಡಿ ಅಕ್ರಮ: ಹೈಕೋರ್ಟ್

Update: 2019-07-04 13:33 GMT

ಚೆನ್ನೈ,ಜು.4: ತಮಿಳುನಾಡು ಸರಕಾರವು ರಾಜ್ಯದ ಮೂರು ಶಾಸನಗಳನ್ನು ಕೇಂದ್ರದ ಭೂ ಸ್ವಾಧೀನ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿ ಅದಕ್ಕೆ ಮಾಡಿದ್ದ ತಿದ್ದುಪಡಿಯು ಅಕ್ರಮ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಬುಧವಾರ ಘೋಷಿಸಿದೆ.

  ರಾಜ್ಯ ಸರಕಾರವು ಮೂರು ರಾಜ್ಯ ಶಾಸನಗಳಡಿ 2013,ಸೆ.27ರಂದು ಮತ್ತು ನಂತರ ಕೈಗೊಂಡಿರುವ ಎಲ್ಲ ಭೂ ಸ್ವಾಧೀನಗಳು ಅಕ್ರಮವಾಗಿವೆ ಎಂದೂ ಅದು ಸ್ಪಷ್ಟಪಡಿಸಿದೆ. ಆದರೆ 2013,ಸೆಪ್ಟೆಂಬರ್‌ಗೆ ಮೊದಲು ಸ್ವಾಧೀನ ಪಡಿಸಿಕೊಂಡಿರುವ ಮತ್ತು ನಿಗದಿತ ಉದ್ದೇಶಕ್ಕಾಗಿ ಈಗಾಗಲೇ ಬಳಕೆಯಲ್ಲಿರುವ ನಿವೇಶನಗಳಿಗೆ ಯಾವುದೇ ವ್ಯತ್ಯಯ ಮಾಡುವಂತಿಲ್ಲ ಎಂದಿದೆ.

ಹರಿಜನ ಕಲ್ಯಾಣ ಯೋಜನೆಗಾಗಿ ತಮಿಳುನಾಡು ಭೂ ಸ್ವಾಧೀನ ಕಾಯ್ದೆ,ಕೈಗಾರಿಕಾ ಉದ್ದೇಶಗಳಿಗಾಗಿ ತಮಿಳುನಾಡು ಭೂ ಸ್ವಾಧೀನ ಕಾಯ್ದೆ ಮತ್ತು ತಮಿಳುನಾಡು ಹೆದ್ದಾರಿಗಳ ಕಾಯ್ದೆ ಇವು ಈ ಮೂರು ಶಾಸನಗಳಾಗಿವೆ.

ಕೇಂದ್ರದ ಭೂ ಸ್ವಾಧೀನ,ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಪಾರದರ್ಶಕತೆ ಕಾಯ್ದೆ,2013ಕ್ಕೆ 105 ಎ ಹೊಸ ಕಲಂ ಸೇರಿಸುವ ಮೂಲಕ ತಮಿಳುನಾಡು ಸರಕಾರವು ತಿದ್ದುಪಡಿಯನ್ನು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News