ನಮ್ಮವರನ್ನು ಜೈಲಿನಿಂದ ಹೊರತರಲು ರಕ್ತ ಹರಿಸಲೂ ಸಿದ್ಧ ಎಂದ ಬಿಜೆಪಿ ಶಾಸಕ !

Update: 2019-07-04 14:10 GMT

ರಾಮನಗರ, ಜು.4: ಪಕ್ಷದ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಶಿಸ್ತು ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ ಬೆನ್ನಿಗೇ, ಮಧ್ಯಪ್ರದೇಶದ ಬಿಜೆಪಿ ಶಾಸಕ, ನಮ್ಮವರನ್ನು ಜೈಲಿನಿಂದ ಹೊರತರಲು ರಕ್ತ ಹರಿಸಲೂ ಸಿದ್ಧ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಮಧ್ಯ ಪ್ರದೇಶದ ಅಮರ್‌ಪಟನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾಮಖೇಲಾವನ್ ಪಟೇಲ್, ಸದ್ಯ ಮುಖ್ಯ ನಗರಪಂಚಾಯತ್ ಅಧಿಕಾರಿ (ಸಿಎಂಒ) ದೇವ್ರತನ್ ಸೋನಿಯವರ ಮೇಲೆ ಸತ್ನಾ ಜಿಲ್ಲೆಯ ರಾಮನಗರಲ್ಲಿ ನಡೆದ ಸಾರ್ವಜನಿ ಸಭೆಯ ವೇಳೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ರಾಮ್ ಸುಶೀಲ್ ಪಟೇಲ್ ಎಂಬಾತನ ಬಿಡುಗಡೆಗೆ ಆಗ್ರಹಿಸಿ ಈ ಹೇಳಿಕೆ ನೀಡಿದ್ದಾರೆ. “ನಾನು ನಿಮಗೆ ಭರವಸೆ ನೀಡುತ್ತೇನೆ, ರಾಮ್ ಸುಶೀಲ್ ಪಟೇಲ್ ಅವರನ್ನು ಜೈಲಿನಿಂದ ನಾವು ಹೊರತಂದೇ ತರುತ್ತೇವೆ. ಅವರನ್ನು ಜೈಲಿನಿಂದ ಹೊರತರಲು ಬಿಜೆಪಿಗೆ ರಕ್ತವನ್ನು ಹರಿಸುವ ಅಗತ್ಯ ಬಿದ್ದರೂ ನಾವು ಹರಿಸುತ್ತೇವೆ” ಎಂದು ಪಟೇಲ್ ತಿಳಿಸಿದ್ದಾರೆ. ಈ ಕುರಿತು ಬಿಜೆಪಿ ವಕ್ತಾರ ರಾಹುಲ್ ಕೊಠಾರಿಯವರಲ್ಲಿ ಕೇಳಿದಾಗ, ಇಂತಹ ಘಟನೆ ನಡೆದ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ದಿನದ ಆರಂಭದಲ್ಲಿ ಬಿಜೆಪಿ ಸಂಸದರ ಮೊದಲ ತಂಡವನ್ನು ತನ್ನ ನಿವಾಸಕ್ಕೆ ಬರಮಾಡಿಕೊಂಡ ಪ್ರಧಾನಿ ಮೋದಿ, ಜನರಿಗಾಗಿ ಕೆಲಸ ಮಾಡಿ, ನಿರಂತರವಾಗಿ ಸಂಸತ್‌ಗೆ ಭೇಟಿ ನೀಡಿ ಮತ್ತು ನಿಮ್ಮನಿಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಸಮಯ ನೀಡಿ ಎಂದು ಕಿವಿ ಮಾತು ಹೇಳಿದ್ದರು. ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಸರಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಪ್ರಧಾನಿ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News