ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ವೆರೋನಿಕಾ ಖಂಡನೆ
ಉಡುಪಿ, ಜು.4: ದ.ಕ. ಜಿಲ್ಲೆಯ ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಖಂಡಿಸಿದ್ದಾರೆ.
ವಿದ್ಯಾರ್ಥಿನಿಯೊಂದಿಗೆ ಆರೋಪಿಗಳು ನಡೆಸಿರುವ ಕೃತ್ಯವು ಅತ್ಯಂತ ಹೇಯವಾಗಿದ್ದು, ಅದರ ವೀಡಿಯೋ ಮಾಡಿವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅದರ ವೀಡಿಯೋ ಮಾಡಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬೀಡುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು, ಇದು ಸಮಾಜ ದಲ್ಲಿ ಮಹಿಳಾ ಸಮುದಾಯಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸುತ್ತಿದೆ.
ಇಂತಹ ಘಟನೆಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪೋಲಿಸ್ ಇಲಾಖೆ ಯಾವುದೇ ಕಾರಣಕ್ಕೂ ಕೂಡ ರಕ್ಷಿಸದೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಯಾವುದೇ ರೀತಿಯ ಒತ್ತಡಗಳಿಗೂ ಮಣಿಯದೆ ಆರೋಪಿಗಳಿಗೆ ಅಜೀವ ಪರ್ಯಂತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.