×
Ad

ಪರವಾನಗಿ ಇಲ್ಲದೇ ಬೀಟೆ ಮರದ ದಿಮ್ಮಿಗಳ ಅಕ್ರಮ ಸಾಗಾಟ; ಆರೋಪಿಗೆ ಶಿಕ್ಷೆ

Update: 2019-07-04 20:27 IST

ಉಡುಪಿ, ಜು.4: ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ದೊಡ್ಡಕುಂದ ಸರಕಾರಿ ಮುಡಗಲ್ ಮೀಸಲು ಅರಣ್ಯ ಪ್ರದೇಶದಿಂದ ಸುಮಾರು 25,000 ರೂ. ಮೌಲ್ಯದ 7 ಬೀಟೆ ಮರದ ದಿಮ್ಮಿಗಳನ್ನು ಕಳವು ಮಾಡಿ ಇನ್ನೋವಾ ಕಾರಿನಲ್ಲಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿ ಸುರೇಶ್ ಹೆಚ್ ಇವರಿಗೆ ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ.

ಸುರೇಶ್, 2012ರ ಜ.6ರ ಬೆಳಗ್ಗೆ 8:30ರ ಸುಮಾರಿಗೆ ಕಳವು ಮಾಡಿದ ಮರದ ದಿಮ್ಮಿಗಳನ್ನು ಕಾರಿನಲ್ಲಿ ಸಾಗಿಸುತಿದ್ದಾಗ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಬಳಿ ವಾಹನವನ್ನು ತಡೆದು ಆರೋಪಿ ಯನ್ನು ಬಂಧಿಸಿ ವಾಹನ ಹಾಗೂ ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ಬ್ರಹ್ಮಾವರದ ಆಗಿನ ಪೊಲೀಸ್ ಉಪನಿರೀಕ್ಷಕ ಹೊಸಕೇರಪ್ಪ ಇವರು ಪ್ರಕರಣ ದಾಖಲಿಸಿದ್ದು, ಬ್ರಹ್ಮಾವರ ವೃತ್ತ ನಿರೀಕ್ಷಕರಾಗಿದ್ದ ಪ್ರಭು ಡಿ. ಟಿ. ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಉಡುಪಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ ಹಾಗೂ ಪೂರಕ ಸಾಕ್ಷ ವನ್ನು ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಎಂ.ಎನ್. ಮಂಜುನಾಥ್ ಆರೋಪಿತನ ವಿರುದ್ಧದ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ 2 ವರ್ಷ ಶಿಕ್ಷೆ ವಿಧಿಸಿ ಜು. 3ರಂದು ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News