ಪುತ್ತೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ದ.ಕ. ಜಿಲ್ಲೆಗೆ ಕಪ್ಪುಚುಕ್ಕೆ: ಸಚಿವ ಖಾದರ್
ಮಂಗಳೂರು, ಜು.4: ಪುತ್ತೂರಿನ ಕಾಲೇಜೊಂದರ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವು ಅತ್ಯಂತ ಕಳವಳಕಾರಿಯಾಗಿದ್ದು, ಘಟನೆಯು ದ.ಕ. ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಗೆ ಗುರುವಾರ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರೊಂದಿಗೆ ಮಾತನಾಡಿದ್ದೇನೆ. ಜತೆಗೆ ಎಸ್ಟಿ-ಎಸ್ಟಿ ಸಮಿತಿಯ ಅಧ್ಯಕ್ಷ ಅಮರನಾಥ್ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚೆ ನಡೆಸಿ, ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.
ಶಿಕ್ಷಿತ ವರ್ಗವೇ ಇಂತಹ ಘಟನೆಯಲ್ಲಿ ತೊಡಗಿರುವುದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗಿದೆ. ಈಗ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಸುಶಿಕ್ಷಿತ ಸಮಾಜಕ್ಕೆ ಧಕ್ಕೆ ಬಾರದಂತೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ವಾದಿಸಬೇಕು. ಜತೆಗೆ ದಲಿತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂದು ಸಚಿವರು ಮನವಿ ಮಾಡಿದರು.