×
Ad

ಹಲ್ಲೆ ಪ್ರಕರಣ: ಆಪ್ ಶಾಸಕನಿಗೆ 6 ತಿಂಗಳು ಜೈಲುಶಿಕ್ಷೆ

Update: 2019-07-04 21:12 IST

ಹೊಸದಿಲ್ಲಿ, ಜು.4: 2015ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್‌ದತ್‌ಗೆ ದಿಲ್ಲಿಯ ನ್ಯಾಯಾಲಯ ಆರು ತಿಂಗಳ ಜೈಲುಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2015ರಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಸಂದರ್ಭ ಸೋಮ್‌ದತ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಜೀವ್ ರಾಣಾ ಎಂಬಾತ ದೂರು ನೀಡಿದ್ದ. 2015ರ ಜನವರಿ 10ರಂದು ಈ ಘಟನೆ ನಡೆದಿದೆ. ಚುನಾವಣಾ ಪ್ರಚಾರ ನಡೆಸುತ್ತಿದ್ದ ಸೋಮ್‌ದತ್ ಹಾಗೂ ಆತನ ಸುಮಾರು 50 ಬೆಂಬಲಿಗರು ತನ್ನ ಮನೆಗೆ ಬಂದು ಪ್ರಚಾರ ನಡೆಸಿದಾಗ ತಾನು ಆಕ್ಷೇಪಿಸಿದ್ದೆ. ಇದರಿಂದ ಕೆರಳಿದ ಸೋಮ್‌ದತ್ ಬೇಸ್‌ಬಾಲ್ ಬ್ಯಾಟಿನಿಂದ ತನ್ನ ಕಾಲಿಗೆ ಹೊಡೆದಿದ್ದಾನೆ. ಆತನ ಬೆಂಬಲಿಗರು ತನ್ನನ್ನು ರಸ್ತೆಯಲ್ಲಿ ಎಳೆದಾಡಿ ಥಳಿಸಿದ್ದಾರೆ ಎಂದು ರಾಣಾ ಎಫ್‌ಐಆರ್‌ನಲ್ಲಿ ತಿಳಿಸಿದ್ದ.

ಸೋಮ್‌ದತ್ ಹಾಗೂ ಆತನ ಬೆಂಬಲಿಗರು ರಾಣಾನ ಮೇಲೆ ಹಲ್ಲೆ ನಡೆಸಿರುವುದರಲ್ಲಿ ಸಂಶಯವಿಲ್ಲ. ಇದರಿಂದ ರಾಣಾ ತೀವ್ರವಾಗಿ ಗಾಯಗೊಂಡಿದ್ದಾನೆ. ಎಷ್ಟು ಮಂದಿ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ. ಶಾಸಕ ದತ್ ಐಪಿಸಿ ಯ ಸೆಕ್ಷನ್ 325, 341 ಹಾಗೂ 147ರಡಿ ತಪ್ಪಿತಸ್ತ ಎಂದು ಕಂಡುಬಂದಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News