ಬಿಜೆಪಿ, ಆರೆಸ್ಸೆಸ್ ವಿರುದ್ಧ 10 ಪಟ್ಟು ಅಧಿಕ ಹುರುಪಿನಿಂದ ಹೋರಾಟ: ರಾಹುಲ್ ಗಾಂಧಿ

Update: 2019-07-04 15:47 GMT

ಮುಂಬೈ, ಜು.4: ಬಿಜೆಪಿ ಮತ್ತು ಆರೆಸ್ಸೆಸ್‌ನೊಂದಿಗೆ ಸೈದ್ಧಾಂತಿಕ ಹೋರಾಟವನ್ನು ಐದು ವರ್ಷಗಳಲ್ಲಿ ನಡೆಸಿದ್ದಕ್ಕಿಂತ 10 ಪಟ್ಟು ಅಧಿಕ ಹುರುಪಿನೊಂದಿಗೆ ಮುಂದುವರಿಸುವುದಾಗಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶದ ಬಡಜನತೆ, ರೈತರು ಹಾಗೂ ಕಾರ್ಮಿಕರ ಜತೆ ತಾನಿರುತ್ತೇನೆ. ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧದ ಹೋರಾಟ ಮುಂದುವರಿಯಲಿದೆ. ಆಕ್ರಮಣ ನಡೆಯುತ್ತಲೇ ಇದೆ ಮತ್ತು ಇದನ್ನು ನಾನು ಆನಂದಿಸುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ಆರೆಸ್ಸೆಸ್ ಕಾರ್ಯಕರ್ತ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ್ದ ರಾಹುಲ್ ಸುದ್ದಿಗಾರರ ಜೊತೆ ಮಾತನಾಡಿದರು. ನ್ಯಾಯಾಲಯದಲ್ಲಿ ತಾನು ಏನನ್ನೂ ಹೇಳಿಲ್ಲ. ವಿಚಾರಣೆಗೆ ಹಾಜರಾಗಬೇಕಿತ್ತು ಅಷ್ಟೇ ಎಂದ ಅವರು, ಬಿಜೆಪಿ ವಿರುದ್ಧ ತನಗೆ ದ್ವೇಷ ಅಥವಾ ಸಿಟ್ಟು ಇಲ್ಲ. ತಮ್ಮದು ಸೈದ್ಧಾಂತಿಕ ಹೋರಾಟವಾಗಿದೆ ಎಂದು ಹೇಳಿದರು. ಈ ಮಧ್ಯೆ, ಅಧ್ಯಕ್ಷತೆ ತ್ಯಜಿಸುವ ರಾಹುಲ್ ನಿರ್ಧಾರಕ್ಕೆ ಬಿಜೆಪಿ ಮುಖಂಡರ ಟೀಕೆ ಮುಂದುವರಿದಿದೆ. ಗಾಂಧಿಯೇತರ ಮುಖಂಡನ ಮೂಲಕ ಪಕ್ಷವನ್ನು ಮರು ನಿರ್ಮಿಸುವ ತಂತ್ರ ಇದಾಗಿದೆ ಎಂದು ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.

ರಾಹುಲ್ ರಾಜೀನಾಮೆಯು ಅತ್ಯಂತ ಹಳೆಯ ಪಕ್ಷದ ಹೊಚ್ಚಹೊಸ ನಾಟಕವಾಗಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News