2020ರ ಅದಮಾರು ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ

Update: 2019-07-04 16:18 GMT

ಉಡುಪಿ, ಜು.4: ಮುಂದಿನ ವರ್ಷದ ಜನವರಿ 18ರಂದು ನಡೆಯುವ ಅದಮಾರು ಮಠ ಪರ್ಯಾಯೋತ್ಸವದ ಪೂರ್ವತಯಾರಿಯಲ್ಲಿ ಮೂರನೇ ಮುಹೂರ್ತವಾದ ಕಟ್ಟಿಗೆ ಮುಹೂರ್ತ ಇಂದು ಶ್ರೀಮಠದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಕಟ್ಟಿಗೆ ಮುಹೂರ್ತ ಮೂರನೇಯದು. ಇದಕ್ಕೆ ಮೊದಲು ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತಗಳು ನಡೆದಿದ್ದು, ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಮುಂದಿನ ಡಿಸೆಂಬರ್ ತಿಂಗಳಲ್ಲಿ ಕೊನೆಯದಾದ ಭತ್ತ ಮುಹೂರ್ತ ನಡೆಯಲಿದೆ.

ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಕಟ್ಟಿಗೆಗಳನ್ನು ಸಂಗ್ರಹಿಸುವುದಕ್ಕಾಗಿ ಕಟ್ಟಿಗೆ ಮುಹೂರ್ತ ನಡೆಯುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸಂಗ್ರಹಿಸಿದ ಕಟ್ಟಿಗೆಗಳನ್ನು ಪರ್ಯಾಯಕ್ಕೆ ಮೊದಲು ಆಕರ್ಷಕ ರಥದ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತದೆ. ಈ ಕಟ್ಟಿಗೆ ರಥ ಉಡುಪಿಯ ಆಕರ್ಷಣೆ ಗಳಲ್ಲಿ ಒಂದಾಗಿರುತ್ತದೆ.

ಸಂಪ್ರದಾಯದಂತೆ ಗುರುವಾರ ಮುಂಜಾನೆ ಅದಮಾರು ಮಠದ ದಿವಾನ ರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಹಾಗೂ ಶಿಬರೂರು ವಾಸುದೇವ ಆಚಾರ್ಯರ ಪೌರೋಹಿತ್ಯದಲ್ಲಿ ಅದಮಾರು ಮಠದ ದೇವರಿಗೆ ಅನಂತರ ಮೆರವಣಿಗೆಯಲ್ಲಿ ತೆರಳಿ ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀಕೃಷ್ಣ- ಮುಖ್ಯಪ್ರಾಣ ೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಅಲ್ಲಿಂದ ಶ್ರೀಮಠಕ್ಕೆ ಮರಳಿ ತಲೆಹೊರೆಯಲ್ಲಿ ಕಟ್ಟಿಗೆಯನ್ನು ಹೊತ್ತು ನಿಂತಿದ್ದ ಏಳು ಮುಂಡಾಲರೊಂದಿಗೆ ಮತ್ತೆ ಮೆರವಣಿಗೆಯ ಮೂಲಕ ಕೃಷ್ಣಮಠದ ಮಧ್ವಸರೋವರ ಈಶಾನ್ಯ ಭಾಗದಲ್ಲಿ ಎತ್ತರದ ಜಾಗದಲ್ಲಿರುವ ಕಟ್ಟಿಗೆ ಸಂಗ್ರಹಿಸುವ ಸ್ಥಳಕ್ಕೆ ಬರಲಾಯಿತು. ಅಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ಕಟ್ಟಿಗೆ ಮುಹೂರ್ತ ನಡೆಸಲಾಯಿತು. ಕಟ್ಟಿಗೆ ರಥದ ನಿರ್ಮಾಣಕ್ಕೆ ಶ್ರೀಕೃಷ್ಣ ಮಠದ ಮೇಸ್ತ್ರಿ ಸುಂದರ ಶೇರಿಗಾರ್ ಚಾಲನೆ ನೀಡಿದರು.

ಎರಡು ವರ್ಷಗಳ ಪರ್ಯಾಯಕ್ಕೆ ಬೇಕಾದ ಕಟ್ಟಿಗೆಯನ್ನು ಸಂಗ್ರಹಿಸಿ ಒಂದು ರಥದ ಮಾದರಿಯಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗುತ್ತದೆ.ಈ ಕಟ್ಟಿಗೆ ರಥದ ಮೇಲ್ಭಾಗದಲ್ಲಿ ಶಿಖರ ಸ್ಥಾಪನೆ ಭತ್ತ ಮುಹೂರ್ತ ದಿನದಂದು ನಡೆಯಲಿದ್ದು, ಅಂದು ಕಟ್ಟಿಗೆ ರಥ ನಿರ್ಮಾಣ ಪೂರ್ಣಗೊಳ್ಳುತ್ತದೆ.
 ಇಂದಿನ ಸಮಾರಂಭದಲ್ಲಿ ಸೋಮಶೇಖರ ಭಟ್, ಎಂ.ಬಿ.ಪುರಾಣಿಕ್, ಜಿಪಂ ಸದಸ್ಯೆ ಶಿಲ್ಪ ಜಿ.ಸುವರ್ಣ, ನಗರಸಭಾ ಪೌರಾಯುಕ್ತ ಆನಂದ ಕಲ್ಲೊಳಿಕರ್, ಸದಸ್ಯರಾದ ಮಾನಸ ಪೈ, ರಶ್ಮಿ ಚಿತ್ತರಂಜನ್ ಭಟ್, ಪಾಡಿಗಾರು ಶ್ರೀನಿವಾಸ ತಂತ್ರಿ,, ರಘುರಾಮ ಆಚಾರ್ಯ, ಸಗ್ರಿ ರಾಘವೇಂದ್ರ ಉಪಾಧ್ಯ, ವೈ.ಎನ್.ರಾಮಚಂದ್ರ ರಾವ್, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ನರಸಿಂಹ ನಾಯಕ್, ಗೋವಿಂದರಾಜ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News