×
Ad

ತಂಝೀಮ್ ವತಿಯಿಂದ ಮೊಬ್ ಲಿಂಚಿಂಗ್ ವಿರುದ್ಧ ಖಂಡನಾ ಸಭೆ, ಪ್ರತಿಭಟನೆ

Update: 2019-07-04 22:21 IST

ಭಟ್ಕಳ: ದೇಶದ ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗದವರನ್ನು ಗುರಿಯನ್ನಾಗಿಸಿಕೊಂಡು ಯೋಜನಾಬದ್ಧ ರೀತಿಯಲ್ಲಿ ನಡೆಯುತ್ತಿರುವ  ಮೊಬ್ ಲಿಂಚಿಂಗ್(ಗುಂಪುಹತ್ಯೆ)ನ ಪ್ರವೃತ್ತಿಯ ವಿರುದ್ಧ ಜೂ.5ರಂದು ಶುಕ್ರವಾರ ಸಂಜೆ 5 ಗಂಟೆಗೆ ಹಳೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಮೈದಾನದಲ್ಲಿ ಖಂಡನಾ ಸಭೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವೇಝ್, ಪ್ರ.ಕಾ. ಅಬ್ದುಲ್ ರಖೀಬ್ ಎಂ.ಜೆ, ಹಾಗೂ ಪ್ರತಿಭಟನಾ ಸಭೆಯ ಸಂಚಾಲಕ ನ್ಯಾಯವಾದಿ ಸೈಯ್ಯದ್ ಇಮ್ರಾನ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ದೇಶದಲ್ಲಿ ಅಮಾಯಕರ, ದುರ್ಬಲರ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಗುಂಪುಹತ್ಯೆಗಳು ದೇಶ ಅಪಾಯದಲ್ಲಿದೆ ಎನ್ನುವುದನ್ನು ತೋರ್ಪಡಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ದ ಮೌಲ್ಯಗಳನ್ನು ಧಿಕ್ಕರಿಸಿ ಕಾನೂನು ಕೈಗೆತ್ತಿಕೊಳ್ಳುವುದರ ಮೂಲಕ ದಲಿತ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿರುವುದು ಮತ್ತು ಅವರನ್ನು ಕಂಬಗಳಿಗೆ ಕಟ್ಟಿ ಗುಂಪು ಹತ್ಯೆ ಮಾಡುತ್ತಿರುವ ಪ್ರವೃತ್ತಿಯ ವಿರುದ್ಧ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಪ್ರತಿಭಟನಾ ಸಭೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂವಿಧಾನ ಪ್ರಸ್ತಾಪಿಸಿದ ಮೌಲ್ಯಗಳನ್ನು ಮರುಸ್ಥಾಪಿಸುವಂತೆ ಮತ್ತು ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವುದು ಸೇರಿದಂತೆ ಅಲ್ಪಸಂಖ್ಯಾತರು, ದುರ್ಬಲರು ವಿಶೇಷವಾಗಿ ಮುಸ್ಲಿಮರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಮತ್ತು ಜನರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ತಡೆಯಬೇಕು,  ದೇಶದ ಎಲ್ಲ ಸಮುದಾಯಗಳಿಗೆ ರಕ್ಷಣೆ ಒದಗಿಸÀಬೇಕು, ಧರ್ಮಧಾರಿತ ತಾರತಮ್ಯಕ್ಕೆ ಕೂಡಲೇ ಕಡಿವಾಣ ಹಾಕಬೇಕು, ಈ ಕುರಿತಂತೆ ಕೇಂದ್ರ ಸರ್ಕಾರ  ರಾಷ್ಟ್ರೀಯ ಮಟ್ಟದಲ್ಲಿ ಒಂದು ಹೊಸ ಕಾನೂನು ರೂಪಿಸುವುದರ ಮೂಲಕ ದೇಶದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯ, ಗುಂಪುಹತ್ಯೆ, ಗಲಭೆಗಳಿಗೆ ಕಡಿವಾಣ ಹಾಕಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು,  ಈ ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಾಗಿರದೆ, ಅಕ್ರಮಿಗಳ, ದಬ್ಬಾಳಿಕೆಗಾರರ ವಿರುದ್ಧವಾಗಿದೆ. ದೌರ್ಜನ್ಯಕ್ಕೊಳಗಾದ ಸಮುದಾಯಕ್ಕೆ  ಆತ್ಮ ಸ್ಥೈರ್ಯವನ್ನು ತುಂಬುವುದಾಗಿದೆ. ಈ ನಿಟ್ಟಿಲ್ಲಿ ಭಟ್ಕಳದ ನ್ಯಾಯಪರ, ಶಾಂತಿಪ್ರೀಯ ಜನತೆ ಜು.5 ರಂದು ನಮ್ಮೊಂದಿಗೆ ಕೈಜೋಡಿಸುವುದರ ಮೂಲಕ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News