ಕುವೈತ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ ಬೆಂಗ್ರೆ ಮಹಿಳೆಯ ರಕ್ಷಣೆ
ಮಂಗಳೂರು, ಜು.4: ಕುವೈತ್‌ಗೆ ಉದ್ಯೋಗಕ್ಕೆ ತೆರಳಿ ತೊಂದರೆಗೆ ಸಿಲುಕಿದ್ದ ಬೆಂಗ್ರೆಯ ರೇಶ್ಮಾ ಸುವರ್ಣ ಅವರನ್ನು ಕುವೈತ್‌ನಲ್ಲಿರುವ ಮಂಗಳೂರಿನ ಮಂದಿ ರಕ್ಷಿಸಿದ್ದಾರೆ.
‘ಆರು ತಿಂಗಳ ಹಿಂದೆ ಮಂಗಳೂರಿನ ಏಜಂಟರೊಬ್ಬರ ಮುಖಾಂತರ ಉದ್ಯೋಗದ ನಿಮಿತ್ತ ಕುವೈತ್‌ಗೆ ಹೋಗಿದ್ದ ಸ್ಯಾಂಡ್‌ಪಿಟ್ ಬೆಂಗ್ರೆಯ ರೇಶ್ಮಾ ಸುವರ್ಣ ಅವರಿಗೆ ಇದುವರೆಗೆ ವೇತನ ನೀಡಿಲ್ಲ, ಮನೆ ಕೆಲಸಕ್ಕೆಂದು ವೀಸಾ ಪಡೆದು ಇಲ್ಲಿಂದ ಹೋಗಿದ್ದು, ಅಲ್ಲಿ ಹಿರಿಯ ನಾಗರಿಕರ ಚಾಕರಿಗೆ ದುಡಿಸಿಕೊಳ್ಳಲಾಗಿದೆ. ಈ ಕೆಲಸದ ಜತೆಗೆ ಮನೆ ಮಾಲಕರಿಂದ ಹೊಡೆತಗಳನ್ನೂ ಅನುಭವಿಸಬೇಕಾಗಿ ಬಂದಿತ್ತು’ ಎಂದು ಆರೋಪಿಸಲಾಗಿದೆ.
ತಾನು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತಂತೆ ಸ್ವತಃ ರೇಶ್ಮಾ ಸುವರ್ಣ ಆಡಿಯೋ ಸಂದೇಶವನ್ನು ಕಳುಹಿಸಿ ತನಗೆ ನೆರವಾಗಬೇಕೆಂದು ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಕುವೈತ್‌ನಲ್ಲಿ ಉದ್ಯೋಗದಲ್ಲಿರುವ ಮಾಧವ ನಾಯಕ್, ದಿನೇಶ್ ಸುವರ್ಣ, ರಾಜ್ ಭಂಡಾರಿ, ಮೋಹನ್‌ದಾಸ್ ಕಾಮತ್ ಅವರು ಆಕೆಯನ್ನು ರಕ್ಷಿಸಿ ಕುವೈತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಕರೆದೊಯ್ದು ರಕ್ಷಣೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೇಶ್ಮಾ ಸುವರ್ಣ ಮತ್ತು ಈಗಾಗಲೇ ಅಲ್ಲಿ ಉದ್ಯೋಗಕ್ಕೆ ತೆರಳಿ ಸಂಕಷ್ಟದಲ್ಲಿರುವ 73 ಮಂದಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಕುವೈತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಸೆಕೆಂಡ್ ಸೆಕ್ರೆಟರಿ ಶಿಬಿ ಯು.ಎಸ್. ಸರ್ವ ರೀತಿಯಲ್ಲಿ ಸಹಕರಿಸಿದ್ದಾರೆ ಎಂದು ಮೋಹನ್‌ದಾಸ್ ಕಾಮತ್ ತಿಳಿಸಿದ್ದಾರೆ.
ರೇಶ್ಮಾ ಸುವರ್ಣ ಅವರು ಆರು ತಿಂಗಳ ಹಿಂದೆ ಕುವೈತ್‌ಗೆ ತೆರಳಿದ್ದರು. ಅವರು ಕುವೈತ್‌ಗೆ ತಲುಪಿದ ದಿನದಂದೇ ಆಕೆಯ ಗಂಡ ತೀರಿಕೊಂಡಿದ್ದರು. ಗಂಡ ನಿಧನ ಹೊಂದಿದ್ದರೂ ಆಕೆಗೆ ವಾಪಸ್ ಬರಲು ಅನುಮತಿ ನೀಡಿರಲಿಲ್ಲ. ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಬೇಕೆಂದು ಕೇಳಿದರೂ ಹಣ ನೀಡಲು ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲಕ ನಿರಾಕರಿಸಿದ್ದರು. ಹೊರಗೆಲ್ಲೂ ಹೋಗದಂತೆ ಗೃಹ ಬಂಧನದಲ್ಲಿ ಇರಿಸಿದಂತೆ ಮನೆ ಮಾಲಕ ನಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ.