ಸಂಘ ಪರಿವಾರದ ಕಾರ್ಯಕರ್ತರು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರ ಮುರಿಯಬೇಕಿದೆ: ಸಂತೋಷ್ ಬಜಾಲ್
ಉಳ್ಳಾಲ : ಸಂಘಪರಿವಾರದ ಕಾರ್ಯಕರ್ತರು ಜಿಲ್ಲೆಯಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರದಿಂದ ವರ್ತಿಸುತ್ತಿದ್ದು ಇದರ ಪರಿಣಾಮವೇ ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವ ಪ್ರಕ್ರಿಯೆ ನಡೆದಿದ್ದು ಇವರ ದುರಹಂಕಾರ ಮತ್ತು ಸೊಕ್ಕನ್ನು ಮುರಿಯಲು ಜಿಲ್ಕೆಯ ಜನತೆ ಮುಂದಾಗಬೇಕಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ , ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ಉಳ್ಳಾಲ ಡಿವೈಎಫ್ಐ ಸಮಿತಿ ದೇರಳಕಟ್ಟೆಯ ಜಂಕ್ಷನ್ ನಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ಮಾಫಿಯಾದ ಪ್ರಮುಖ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದ್ದು ವಿದ್ಯಾರ್ಥಿ ಮತ್ತು ಯುವಜನರಿಗೆ ಬಹಳ ಸುಲಭವಾಗಿ ಡ್ರಗ್ಸ್ ದೊರಕುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಇಲ್ಲಿನ ಶಾಸಕರು ಮತ್ತು ಸಂಸದರು ಜನಗಳ ಸಮಸ್ಯೆಗಿಂತ ಹೆಚ್ಚಾಗಿ ದನಗಳ ಸಮಸ್ಯೆಗೆ ಆದ್ಯತೆ ನೀಡುತ್ತಿದ್ದು ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಮುಂದಾಗಬೇಕೆಂದು ಒತ್ತಾಯಿಸಿದರು.
ವರ್ಷದ ಹಿಂದೆ ಉಳ್ಳಾಲದಲ್ಲಿ ಮೀಸೆ ಮೂಡದ ಹುಡುಗರು ನಡೆಸಿದ ಜುಬೈರ್ ಎಂಬುವವರ ಕೊಲೆ ಪ್ರಕರಣ , ಮೊನ್ನೆ ದೇರಳಕಟ್ಟೆ ಸಮೀಪ ಸುಶಾಂತ್ ಎಂಬ ಯುವಕ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಚೂರಿ ಇರಿದ ಪ್ರಕರಣ ಹಾಗೂ ಇನ್ನಿತರ ಹಲವು ಕ್ರಿಮಿನಲ್ ಕೃತ್ಯಗಳ ಹಿಂದೆ ಡ್ರಗ್ಸ್ ಪ್ರಭಾವವಿದ್ದು ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕದೇ ಪ್ರದೇಶದಲ್ಲಿ ಕ್ರೈಂ ಮಟ್ಟ ಹಾಕುವುದು ಅಸಾಧ್ಯ ಎಂದರು.
ಸಭೆಯನ್ನುದ್ದೇಶಿಸಿ ಡಿವೈಎಫ್ಐ ಮುಖಂಡರಾದ ಅಶ್ರಫ್ ಕೆಸಿ ರೋಡ್ , ನಿತಿನ್ ಕುತ್ತಾರ್ ಮಾತನಾಡಿದರು. ಸಭೆಯಲ್ಲಿ ಸಿಪಿಐಎಂ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ , ಡಿವೈಎಫ್ಐ ಮುಖಂಡರಾದ ರಫೀಕ್ ಹರೇಕಳ , ಸುನಿಲ್ ತೇವುಲ , ಸಂತೋಷ್ ಪಿಲಾರ್ , ಗ್ರಾಮ ಪಂಚಾಯತಿ ಸದಸ್ಯ ಅಶ್ರಫ್ ಹರೇಕಳ , ರಜಾಕ್ ಮುಡಿಪು , ಇಬ್ರಾಹಿಂ ಮದಕ, ಜಯಂತ್ ನಾಯ್ಕ್ ಉಪಸ್ಥಿತರಿದ್ದರು. ರಝಾಕ್ ಮೊಂಟೆಪದವು ಸ್ವಾಗತಿಸಿ ವಂದಿಸಿದರು.