×
Ad

ಚೆಂಬುಗುಡ್ಡೆಯಲ್ಲಿ ವ್ಯಕ್ತಿ ಕೊಲೆ ಪ್ರಕರಣ: ಮನೆ ಬಿಟ್ಟು ಹೋಗಲು ಒಪ್ಪದಿರುವುದಕ್ಕೆ ಹತ್ಯೆ !

Update: 2019-07-04 22:46 IST

ಉಳ್ಳಾಲ:  ತೊಕ್ಕೊಟ್ಟು ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಮುಂಭಾಗದಲ್ಲಿ ಬುಧವಾರ ನಡೆದ ನಾರಾಯಣ ಎಂಬವರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಿದ್ದು, ಮೃತ ವ್ಯಕ್ತಿಯು ಆರೋಪಿಯ ತಾಯಿಯ‌ ಅಣ್ಣನ ಮಗನಾಗಿದ್ದು, ಆತ ಮನೆ ಬಿಟ್ಟು ಹೋಗಲು ಒಪ್ಪದೇ ಇದ್ದ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಚೆಂಬುಗುಡ್ಡೆ  ನಿವಾಸಿ ಲಲಿತಾ ಅವರ ಅಣ್ಣನ ಮಗ ಎಂದು ಹೇಳಲಾಗುತ್ತಿರುವ ನಾರಾಯಣ (48) ಕೊಲೆಯಾಗಿದ್ದು ಲಲಿತಾ ಅವರ ಮಗ ರಾಜೇಶ್ (37) ಕೊಲೆ ಆರೋಪಿ. ರಾಜೇಶ್ ನನ್ನು ಉಳ್ಳಾಲ ಪೊಲೀಸರು ಕೊಲೆ ಆರೋಪದಡಿ ವಶಕ್ಕೆ ಪಡೆದಿದ್ದು, ಬಾವನ ಕೊಲೆ ಮಾಡಿರುವುದಾಗಿ ಆರೋಪಿ ರಾಜೇಶ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಲಲಿತಾ ಅವರು ತಮ್ಮ ಮಕ್ಕಳು ಮತ್ತು ಅವರ ಅಣ್ಣನ ಮಗ ನಾರಾಯಣರ ಜೊತೆ ಕಳೆದ ಇಪ್ಪತೈದು ವರ್ಷಗಳಿಂದ ಚೆಂಬುಗುಡ್ಡೆಯಲ್ಲಿ ನೆಲೆಸಿದ್ದರೆನ್ನಲಾಗಿದ್ದು, ಲಲಿತಾ ಅವರ ಮಗ ರಾಜೇಶ್ ಮದುವೆಯಾಗಲು ನಿರ್ಧರಿಸಿದ್ದು, ಈ ವಿಚಾರವನ್ನು ಬಾವ ನಾರಾಯಣ್ ರಲ್ಲಿ ತಿಳಿಸಿದ್ದು ಬಾವನನ್ನು ಬೇರೆ ಮನೆ ಮಾಡಲು ಹೇಳಿದ್ದನೆನ್ನಲಾಗಿದೆ. ಆದರೆ ಮನೆ ಬಿಟ್ಟು ಹೋಗಲು ಆತ ಒಪ್ಪದ ಕಾರಣ ರಾಜೇಶ್ ಮತ್ತು ನಾರಾಯಣ್ ನಡುವೆ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ಬುಧವಾರ ಸಂಜೆ ನಡೆದ ವಾಗ್ವಾದವು ತಾರಕಕ್ಕೇರಿ ರಾಜೇಶ್ ಕತ್ತಿಯಿಂದ ಬಾವನನ್ನ ಕಡಿದು ಕೊಲೆ ಮಾಡಿದ್ದಾನೆನ್ನಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News