ಜು.5: ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ರ್ಯಾಲಿ
ಮಂಗಳೂರು, ಜು.4: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯಿಂದ 9ನೇ ಆವೃತ್ತಿಯ ದೇಶದ ಅತಿದೊಡ್ಡ ‘ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ರ್ಯಾಲಿ’ಯನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ರ್ಯಾಲಿಯು ಜು.5ರಂದು ಸಂಜೆ 5:30ಕ್ಕೆ ನಗರದ ಫೋರಮ್ ಫಿಝಾ ಮಾಲ್ ಎದುರು ಚಾಲನೆಗೊಳ್ಳಲಿದೆ.
ಮಂಗಳೂರಿನಲ್ಲಿ ಜು.5ರಂದು ಚಾಲನೆಗೊಳ್ಳುವ ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ರ್ಯಾಲಿಯು ಮೈಸೂರು ಮೂಲಕ ತಮಿಳುನಾಡಿನ ಊಟಿಯಲ್ಲಿ ಜು.7ರಂದು ಸಮಾಪ್ತಿಯಾಗಲಿದೆ. ರ್ಯಾಲಿಯು ಹೆದ್ದಾರಿಗಳು, ರಸ್ತೆಗಳು, ಒರಟು ರಸ್ತೆಗಳು, ಪಶ್ಚಿಮಘಟ್ಟಗಳ ಭವ್ಯವಾದ ಅಂಗಣದಲ್ಲಿ ನಡೆಯಲಿದ್ದು, ಚಾಲೆಂಜಿಂಗ್ ಮಾರ್ಗವನ್ನು ಹೊಂದಿದೆ ಎಂದು ಮಹೀಂದ್ರಾ ಅಡ್ವೆಂಚರ್ ಮುಖ್ಯಸ್ಥ ಸೆಲ್ವಿನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅತಿದೊಡ್ಡ ಟಿಎಸ್‌ಡಿ (ಸಮಯ, ವೇಗ, ದೂರ) ರ್ಯಾಲಿ ಇದಾಗಿದ್ದು, ಅಧಿಕ ಪ್ರಮಾಣದ ಪ್ರಶಸ್ತಿ ಮೊತ್ತವನ್ನು ಘೋಷಿಸಲಾಗಿದೆ. ರ್ಯಾಲಿಯಲ್ಲಿ ಮಹೀಂದ್ರಾ ಕಂಪೆನಿಯ 40 ವಾಹನಗಳು ಪಾಲ್ಗೊಳ್ಳಲಿವೆ. ರ್ಯಾಲಿಯು 600 ಕಿ.ಮೀ.ಗಿಂತ ಹೆಚ್ಚು ದೂರ ಸವಾಲಿನ ಒರಟು ಮಾರ್ಗದಲ್ಲಿ ನಡೆಯಲಿದ್ದು, ಸ್ಪರ್ಧೆಯು ಎರಡು ದಿನಗಳ ಕಾಲ ನಡೆಯಲಿದೆ ಎಂದರು.
ರ್ಯಾಲಿಯು ಹಲವು ವಿಭಾಗಗಳಲ್ಲಿ ಜರುಗಲಿದೆ. ವೃತ್ತಿಪರ, ಕಾರ್ಪೊರೇಟ್, ಮಹಿಳಾ, ದಂಪತಿ, ಅಮೆಚ್ಯೂರ್, ಮುಕ್ತ ವಿಭಾಗ ಸೇರಿದಂತೆ ಮಾಧ್ಯಮ ವರ್ಗವೂ ಪಾಲ್ಗೊಳ್ಳಲಿದೆ. ಮಾನ್ಸೂನ್ ರ್ಯಾಲಿಯ ಪ್ರಶಸ್ತಿ ಮೊತ್ತವು 5.5 ಲಕ್ಷ ರೂ. ಇದ್ದು, ದೇಶದ ಅತಿದೊಡ್ಡ ಟಿಎಸ್‌ಡಿ ಮೋಟಾರ್ ಕ್ರೀಡೆಯಾಗಿದೆ ಎಂದರು.
ಇದು ಫೆಡರೇಶನ್ ಆಫ್ ಮೋಟಾರ್ ಸ್ಪೋಟ್ಸ್ ಕ್ಲಬ್ ಅಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಅನುಮೋದನೆ ಪಡೆದಿದೆ. ರ್ಯಾಲಿಯನ್ನು ವಿಶೇಷವಾಗಿ ಮಹೀಂದ್ರಾ ವಾಹನಗಳ ಮಾಲಕರಿಗೆ ಆಯೋಜಿಸಲಾಗಿದೆ. ಇಂಡಿಯನ್ ಮೋಟಾರ್ ಸ್ಪೋರ್ಟ್ ಕ್ಲಬ್ ಆಫ್ ಇಂಡಿಯಾ (ಐಎಂಎಸ್‌ಸಿ) ಸಹಯೋಗದಲ್ಲಿ ಮಹೀಂದ್ರಾ ಅಡ್ವೆಂಚರ್ ತಂಡವು ಮಾನ್ಸೂನ್ ರ್ಯಾಲಿಯನ್ನು ನಡೆಸಲಿದೆ. ರ್ಯಾಲಿಯುದ್ದಕ್ಕೂ ಯಾವುದೇ ಅಡೆತಡೆಯಿಲ್ಲದ ಸೇವೆ ನೀಡಲು ‘ವಿತ್ ಯು ಹಮೇಶಾ’ ಸೇವಾ ತಂಡದ ಭರವಸೆ ಇದೆ ಎಂದು ಅವರು ತಿಳಿಸಿದರು.