ಶೇಖ್ ಹಸೀನಾ ಮೇಲೆ ದಾಳಿ: 9 ಮಂದಿಗೆ ಮರಣ ದಂಡನೆ

Update: 2019-07-04 18:11 GMT

ಢಾಕಾ, ಜು. 4: 25 ವರ್ಷಗಳ ಹಿಂದೆ ಪ್ರಧಾನಿ ಶೇಖ್ ಹಸೀನಾರನ್ನು ಕೊಲೆಗೈಯಲು ಯತ್ನಿಸಿರುವುದಕ್ಕಾಗಿ ಪ್ರಧಾನ ಪ್ರತಿಪಕ್ಷದ 9 ಸದಸ್ಯರಿಗೆ ಬಾಂಗ್ಲಾದೇಶದ ನ್ಯಾಯಾಲಯವೊಂದು ಬುಧವಾರ ಮರಣದಂಡನೆ ವಿಧಿಸಿದೆ ಹಾಗೂ 25 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

1994ರಲ್ಲಿ ಹಸೀನಾರನ್ನು ಒಯ್ಯುತ್ತಿದ್ದ ರೈಲೊಂದರ ಮೇಲೆ ನಡೆದ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆಗಳನ್ನು ಘೋಷಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.

ಆಕ್ರಮಣ ನಡೆದ ಸಂದರ್ಭದಲ್ಲಿ ಶೇಖ್ ಹಸೀನಾ ಪ್ರತಿಪಕ್ಷ ನಾಯಕಿಯಾಗಿದ್ದರು ಹಾಗೂ ಅವರ ಬದ್ಧ ವಿರೋಧಿ ಖಾಲಿದಾ ಝಿಯಾ ಪ್ರಧಾನಿಯಾಗಿದ್ದರು. ಈಗ ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿ (ಬಿಎನ್‌ಪಿ)ಯ ಮುಖ್ಯಸ್ಥೆ ಖಾಲಿದಾ ಝಿಯಾ ಪ್ರತಿಪಕ್ಷ ನಾಯಕಿಯಾಗಿದ್ದಾರೆ.

‘‘ಆರೋಪಿಗಳು ಹಸೀನಾರನ್ನು ಗುರಿಯಾಗಿಸಿ ರೈಲಿನ ಕೋಚ್ ‌ನತ್ತ ಬಾಂಬ್‌ಗಳನ್ನು ಎಸೆದರು ಹಾಗೂ ಕೋಚ್‌ಗಳಿಗೆ ಬೆಂಕಿ ಹಚ್ಚಿದರು ಹಾಗೂ ಅವರನ್ನು ಕೊಲ್ಲಲು ಯತ್ನಿಸಿದರು’’ ಎಂದು ಸರಕಾರಿ ವಕೀಲ ಅಮೀನುಲ್ ಇಸ್ಲಾಮ್ ಪಬ್ನ ಪಟ್ಟಣದ ನ್ಯಾಯಾಲಯದ ಹೊರಗೆ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ರಾಜಧಾನಿ ಢಾಕಾದಿಂದ 160 ಕಿ.ಮೀ. ದೂರದಲ್ಲಿರುವ ಪಬ್ನ ಪಟ್ಟಣದಲ್ಲಿ ಆಕ್ರಮಣ ನಡೆದಿತ್ತು.

 ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾರ ಮಿತ್ರಕೂಟವು ಬೃಹತ್ ವಿಜಯವನ್ನು ದಾಖಲಿಸಿದೆ ಎಂಬುದಾಗಿ ಬಾಂಗ್ಲಾದೇಶದ ಚುನಾವಣಾ ಆಯೋಗವು ಸೋಮವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಇದರೊಂದಿಗೆ ಅವರು ಸತತ ಮೂರನೆ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ.

ಆದಾಗ್ಯೂ, ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News